ಅಹಿಂಸಾ ಪರಮೋ ಧರ್ಮ ಎನ್ನುವ ಮೂಲಕ ಅಹಿಂಸಾ ತತ್ವದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾಪುರುಷ ಭಗವಾನ್ ಮಹಾವೀರ–ಕೆ.ಎಂ ಶಿವಪ್ಪ

ಕೃಷ್ಣರಾಜಪೇಟೆ:ಅಹಿಂಸಾ ಪರಮೋ ಧರ್ಮ ಎನ್ನುವ ಮೂಲಕ ಅಹಿಂಸಾ ತತ್ವದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾಪುರುಷ ಭಗವಾನ್ ಮಹಾವೀರ ಎಂದು ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಹೇಳಿದರು.ಅವರು ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಾಡ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು._

_ಜೈನ ಧರ್ಮ ಸಮಷ್ಠಿ ಪ್ರಜ್ಞೆಯಿಂದ ಹುಟ್ಟಿದ ಧರ್ಮ ಆದಿ ತೀರ್ಥಂಕರ ವೃಷಬದೇವನಬಿಂದ ಮಹಾವೀರರ ವರೆಗೆ 24 ಜನ ತೀರ್ಥಂಕರರು ಕಾಲಕಾಲಕ್ಕೆ ಮಾನವ ಕುಲದ ಅಗತ್ಯತೆಗಳಿಗೆ ತಕ್ಕಂತೆ ಜೈನ ಧರ್ಮವನ್ನು ಸುಧಾರಿಸಿ ಮಾನವ ಧರ್ಮವನ್ನಾಗಿ ರೂಪಿಸಿದ್ದಾರೆ. ಆದಿ ತೀರ್ಥಂಕರ ವೃಷಬದೇವನಿಂದ ಸಂಸ್ಥಾಪಿಸಲ್ಪಟ್ಟ ಜೈನ ಧರ್ಮವನ್ನು ಮತ್ತಷ್ಟು ಸುಧಾರಿಸಿ ವಿಸ್ತರಿಸಿದ ಕೀರ್ತಿ 24 ನೇ ತೀರ್ಥಂಕರ ಮಹಾವೀರರಿಗೆ ಸಲ್ಲುತ್ತದೆ. ಕ್ರಿ.ಶ 599 ರಲ್ಲಿ ಇಂದಿನ ಬಿಹಾರ ರಾಜ್ಯದಲ್ಲಿ ರಾಜ ಸಿದ್ದಾರ್ಥ ಮತ್ತು ತ್ರಿಶಲಾದೇವಿಯವರ ಪುತ್ರನಾಗಿ ಜನಿಸಿದ ಮಹಾವೀರರು ತಮ್ಮ 28 ನೇ ವಯಸ್ಸಿನಲ್ಲಿ ಜಿನ ದೀಕ್ಷೆಯನ್ನು ಪಡೆದು ಮಾನವ ಕುಲದ ಉದ್ದಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ವೈಭವದ ರಾಜತ್ವವನ್ನು ತ್ಯಜಿಸಿ ಸಮಾಜದ ಒಳಿತಿಗೆ ಚಿಂತಿಸಿದರು.12 ವರ್ಷಗಳ ಕಾಲ ಕಠಿಣ ತಪ್ಪಸ್ಸು ಮಾಡಿದ ಮಹಾವೀರರು ತಾವು ಕಂಡ ಬದುಕಿನ ಸತ್ಯಗಳನ್ನು ಜನರ ಮುಂದಿಟ್ಟು ಜನರಲ್ಲಿ ಸಾಮಾಜಿಕ ಅರಿವು ಮೂಡಿಸುವ ಕೆಲಸ ಮಾಡಿದರು. ಯಜ್ಞ ಯಾಗದಿಗಳಲ್ಲಿ ನೀಡುತ್ತಿದ್ದ ಪ್ರಾಣಿ ಬಲಿಯನ್ನು ವಿರೋಧಿಸಿ ಅಹಿಂಸೆಯೇ ನಿಜವಾದ ಧರ್ಮ ಎಂದು ಜಗತ್ತಿಗೆ ಸಾರಿದರು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎನ್ನುವ ನಂಬಿಕೆಯ ತಳಹದಿಯಲ್ಲಿ ನಿರ್ಮಿತವಾದ ಜಿನ ಧರ್ಮದ ತತ್ವಗಳು ಮೋಕ್ಷದ ದಾರಿಗಳು ಎಂದು ಜಗತ್ತಿಗೆ ಸಾರಿದ ಮಹಾಪುರುಷ ಭಗವಾನ್ ಮಹಾವೀರ ಎಂದ ಕೆ.ಎಂ.ಶಿವಪ್ಪ ಅಹಿಂಸೆಯ ಮೂಲಕ ನಾವು ಹಿಂಸೆಯನ್ನು ಮಣಿಸಬಹುದು ಎಂದು ಅಭಿಪ್ರಾಯಪಟ್ಟರು._

_ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ನೇತೃತ್ವದಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು,_

_ಕಾರ್ಯಕ್ರಮದಲ್ಲಿ ಅಗ್ನಿ ಶಾಮಕ ಅಧಿಕಾರಿ ಚಂದ್ರಶೇಖರ್, ಆರೋಗ್ಯ ಪರಿವೀಕ್ಷಕ ಶೀಳನೆರೆ ಸತೀಶ್, ಕಂದಾಯ ಇಲಾಖೆಯ ಅಮೃತ್ ರಾಜ್, ತಾಲೂಕು ಮಾರ್ವಾಡಿ ಸಮುದಾಯದ ಮುಖಂಡ ರೋಷನ್ ಸೇರಿದಂತೆ ಹಲವರಿದ್ದರು.

*_ವರದಿ ಸಾಯಿಕುಮಾರ್. ಎನ್. ಕೆ, ಕೃಷ್ಣರಾಜಪೇಟೆ,_*