3 ತಿಂಗಳಿಗಾಗುವಷ್ಟು ದವಸ ಧಾನ್ಯ ಸಂಗ್ರಹ ಮೂಲಕ ಉಗ್ರ ಹೋರಾಟಕ್ಕೆ ವೇದಿಕೆ ಸಜ್ಜು
ಚನ್ನರಾಯಪಟ್ಟಣ:ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಯ 1777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ರೈತರು ನಡೆಸುತ್ತಿರುವ ಧರಣಿಯೂ ಇಂದಿನಿಂದ ಜಿಲ್ಲಾಡಳಿತ ಭವನದ ಆವರಣಕ್ಕೆ ಸ್ಥಳಾಂತರಗೊಳ್ಳುವ ಮೂಲಕ ರೈತರ ವಿರೋಧಿ ಸರ್ಕಾರದ ವಿರುದ್ಧ ಗೋಷಣೆ ಕೂಗುವ ಮೂಲಕ ಚಾಲನೆ ನೀಡಿದರು.
ಕಳೆದ 1078 ದಿನಗಳಿಂದ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರು ನಿರಂತರವಾಗಿ ಧರಣಿ ನಡೆಸುತ್ತಿದ್ದು, ರಾಜ್ಯ, ರಾಷ್ಟ್ರ ನಾಯಕರು ಇಲ್ಲಿನ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರವೂ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಬಾರದು ಎಂದು ಒಕ್ಕೊರಲಿನಿಂದ ಒತ್ತಾಯಿಸಿದ್ದರು.
ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಿದ್ದ ಹೋರಾಟಕ್ಕೆ ಆಗಮಿಸಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೇ, ಭೂ ಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯುವುದಾಗಿ ಆಶ್ವಾಸನೆ ನೀಡಿದ್ದರು.
ಈಗಾಗಲೇ 2-3 ಬಾರಿ ಕೈಗಾರಿಕೆ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಸಭೆಗಳು ನಡೆದಿದ್ದು, ಅವು ಯಾವುದು ಪ್ರತಿಫಲ ನೀಡದೇ ಇದ್ದ ಕಾರಣ ರೈತರು ತಾಳ್ಮೆ ಕಳೆದು ಕೊಂಡು ಜಿಲ್ಲಾಡಳಿತ ಭವನದ ಆವರಣಕ್ಕೆ ಹೋರಾಟವನ್ನು ಮಾಡಲು
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿದ್ದರು, ಕಾಂಗ್ರೆಸ್ ಸರ್ಕಾರ ಬಂದ ನಂತರವೂ ದೇವನಹಳ್ಳಿ ಟೌನ್ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದರು, ರೈತ ಮುಖಂಡರನ್ನು ಬೆಂಗಳೂರು ನಗರ ಪೊಲೀಸ್ ಈಶನ್ಯ ವಿಭಾಗದ ಡಿಸಿಪಿ ಹೋರಾಟ ನಡೆಸದಂತೆ ಪ್ರಕರಣ ದಾಖಲಿಸಿ, ಮುಚ್ಚಳಿಕೆ ಬರೆದುಕೊಡುವಂತೆ ಒತ್ತಡ ಹೇರಿದ್ದರು.
ಆಡಳಿತರೂಢ ರಾಜಕೀಯ ಮುಖಂಡರು, ಪೊಲೀಸರ ಬೆದರಿಕೆಗೆ ಬಗ್ಗದ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟಗಾರರು ನ್ಯಾಯಾಲಯದಲ್ಲಿ ಸಂಘರ್ಷವನ್ನು ಮಾಡುತ್ತಾ, ಧರಣಿಗೆ ಇನ್ನಷ್ಟು ಉಗ್ರ ಸ್ವರೂಪ ನೀಡಿ, ಜಿಲ್ಲಾಡಳಿತ ಭವನಕ್ಕೆ ಹೋರಾಟವನ್ನು ಸ್ಥಳಾಂತರಿಸುತ್ತಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಅನೇಕರು ರೈತರ ಪರವಾಗಿ ಇರುತ್ತೇವೆ ಎಂದು ಭಾಷಣ ಮಾಡಿ ಹೋದವರು 1078 ದಿನಗಳ ರೈತರ ಆಗ್ರಹಕ್ಕೆ ತಾಕೀಕ ಅಂತ್ಯ ನೀಡಲು ಸೋತ್ತಿದ್ದಾರೆ.
ಹಿಂದೆ ಇದ್ದ ಜಿಲ್ಲಾಧಿಕಾರಿ ಎನ್.ಶಿವಶಂಕರ್ ಅವರು ರೈತರ ಪರವಾಗಿ ಇರುತ್ತೇನೆ ಎಂದು ಸಾಕಷ್ಟು ಸಭೆಗಳನ್ನು ನಡೆಸಿ, ಸರ್ಕಾರದೊಂದಿಗೆ ನಡೆದ ಸಭೆಯಲ್ಲಿ ಭಾಗಿಯಾಗಿ ರೈತ ಹೋರಾಟದ ಕುರಿತು ಸರ್ಕಾರದ ಪ್ರಮುಖರಿಗೆ ಮನವರಿಕೆ ಮಾಡಿಕೊಟ್ಟಿದ್ದರು, ಇದರ ನಡುವೆಯೇ ಕೆಐಎಡಿಬಿ ಅಧಿಕಾರಿಗಳು 13 ಹಳ್ಳಿಗಳ ಪೈಕಿ 2 ಹಳ್ಳಿಗಳ ಜಮೀನು ಸರ್ವೆ ಕಾರ್ಯವನ್ನು ಮಾಡಿತ್ತು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ತಾತ್ಕಲಿಕವಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ತಡೆ ಸಿಕ್ಕಿದೆ. ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿ ಎ.ಬಿ.ಬಸವರಾಜ್ ಅವರು ನಾನೊಬ್ಬ ರೈತನ ಮಗ ನಾನು ರೈತ ಪರವಾಗಿ ಇರುತ್ತೇನೆ. ನಿಮ್ಮ ನ್ಯಾಯಯುತ ಹೋರಾಟವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೋರಾಟ ಸ್ಥಳಕ್ಕೆ ಬಂದು ಭಾಷಣ ಮಾಡಿ ಹೋಗಿದ್ದಾರೆ. ಅಧಿಕಾರಿಗಳು ಸರ್ಕಾರವನ್ನು ಮೆಚ್ಚಿಸಿ ರೈತರ ಕಣ್ಣೊರೆಸುವ ತಂತ್ರ ಪಾಲಿಸುತ್ತಿದ್ದಾರೆ. ಭೂ ಸ್ವಾಧೀನ ಸಮಸ್ಯೆಗೆ ಯಾರಿಂದಲೂ ಕಳೆದ 1078 ದಿನಗಳಿಂದ ಪರಿಹಾರ ಸೂಚಿಸಲು ಸಾಧ್ಯವಾಗಿಲ್ಲ.
ಭೂ ಸ್ವಾಧೀನ ಹೋರಾಟ ಸಮಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ಇಂದಿನ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಬಂಡವಾಳಶಾಹಿಗಳ ಹಿತ ಕಾಪಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ ನಮ್ಮಿಂದ ಆಯ್ಕೆ ಆದಂತಹ ಚುನಾಯಿತ ಪ್ರತಿನಿಧಿಗಳು ಸಹ ರೈತರ ಬಡವರ ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ , ನಮ್ಮ ಜನರು ತಮ್ಮ ಮತಗಳನ್ನು ಮಾರಿಕೊಳ್ಳದೆ ನಮ್ಮ ಹಿತ ಕಾಯುವ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮಗಳ ಮೇಲಿದೆ ಈ ಬದಲಾವಣೆ ತಳಹಂತದಿಂದಲೇ ಪ್ರಾರಂಭ ಆಗಬೇಕು ಆಗ ಮಾತ್ರ ಸಮಾಜದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ನೀರಾವರಿ ಹೋರಾಟಗಾರರಾದ ಆಂಜನೇಯ ರೆಡ್ಡಿ ಮಾತನಾಡಿ ನಮ್ಮ ಹೋರಾಟ ಕಳೆದ ಒಂದು ವರ್ಷಗಳಿಂದ ನಡೆಯುತ್ತಿದ್ದು ಸರ್ಕಾರ ಯಾವುದೇ ರೀತಿಯ ಪ್ರಯತ್ನ ಮಾಡದೆ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರೈತರನ್ನು ಅನವಶ್ಯಕವಾಗಿ ತೊಂದರೆಗೆ ದೂಡುವ ಮೂಲಕ ಸಮಸ್ಯೆಗಳಿಗೆ ಸಿಲುಕಿಸುತ್ತಿದೆ ಇವುಗಳ ವಿರುದ್ಧ ನಾವುಗಳು ಶಿಸ್ತು ಮತ್ತು ಬದ್ಧತೆಯಿಂದ ಮುನ್ನಡೆಯಬೇಕು ನಾವುಗಳು ಈ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಮತ್ತು ಅವಶ್ಯಕತೆ ನಮಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ವೆಂಕಟನಾರಾಯಣಪ್ಪ ಮಾತನಾಡಿ ಸರ್ಕಾರವು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ಬರಡುಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದರೆ ನಮ್ಮಗಳ ವಿರೋಧವಿಲ್ಲ ಆದರೆ ಫಲವತ್ತಾದ ಕೃಷಿ ಭೂಮಿಯಲ್ಲಿ ಸ್ಥಾಪಿಸುವುದು ಯಾವ ನ್ಯಾಯ ಇವರಿಗೆ ದೇವನಹಳ್ಳಿ ಸುತ್ತಮುತ್ತಲಿನ ಜಮೀನಿನ ಮೇಲೆ ಏಕೆಷ್ಟು ವ್ಯಾಮೋಹ ಎಂದು ಪ್ರಶ್ನಿಸಿದರು.
* ಹೆಚ್ಚು ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದು, ಇಡೀ ಜಿಲ್ಲಾಡಳಿತ ವನ್ನೇ ಸ್ತಬ್ಧಗೊಳಿಸಲಿದ್ದಾರೆ. ಮಾಡು ಇಲ್ಲವೇ ಮಡಿ ಎಂಬ ನಿರ್ಧಾರದಲ್ಲಿ ಹೋರಾಟವೂ ಮುಂದುವರೆಯಲಿದೆ.
ಈ ಸಂಧಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೆ.ಟಿ.ಗಂಗಧಾರ್,ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್,ಕರ್ನಾಟಕ ಪ್ರಾತ್ಯ ರೈತ ಸಂಘದ ಯಶವಾತ್,ನೀರಾವರಿ ಹೋರಾಟಗಾರ ಅಂಜಿನೇಯಾ ರೆಡ್ಡಿ,ರೂತ ಮುಖಂಡ ಜಿ.ಜಿ ಹಳ್ಳಿ ನಾರಾಯಣಸ್ವಾಮಿ,ಚಂದ್ರತೇಜಸ್ವಿ,ಪ್ರಭಾ ಬೆಳವಗಲ,ಕಾರ್ಮಿಕ ಮುಖಂಡರಾದ ನರಸಿಂಹ ಮೂರ್ತಿ,ಗೋಪಾಲ್ ಗೌಡ,ರಾಜ್ಯ ರೈತ ಸಂಘ ವೆಂಕಟನಾರಾಯಣಪ್ಪ,ಮುನಿಶಾಮಪ್ಪ,ಶಶಿಧರ್,ಕರವೇ ಚಂದ್ರಶೇಖರ್, ತಾಪಂ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಚನ್ನರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಮಾರೇಗೌಡ,ರೈತ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ,ಚನ್ನರಾಯಪಟ್ಟಣ ಅಶ್ವತ್ಥಪ್ಪ,ತಿಮ್ಮರಾಯಪ್ಪ,ಚಿಮಾಚನಹಳ್ಳಿ ರಾಮಚಂದ್ರಪ್ಪ,ಮುಂಕುದ,ಸೋಮತ್ತನಹಳ್ಳಿ ಸುಬ್ರಮಣಿ ಇದ್ದರು.