ನಗರಸಭೆ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಪ್ರತಿಭಟನೆ
ದೊಡ್ಡಬಳ್ಳಾಪುರ: ನಗರಸಭೆಯಲ್ಲಿ ನಡೆಯುತ್ತಿರುವ ಮಿತಿ ಮೀರಿದ ಭ್ರಷ್ಟಾಚಾರವನ್ನು ವಿರೋಧಿಸಿ ಕರ್ನಾಟಕ ನವನಿರ್ಮಾಣ ಸೇನೆ ವತಿಯಿಂದ ನಗರಸಭೆ ಕಛೇರಿ ಮುಂಬಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಎಂ ಮುರುಳಿಮೋಹನ್ ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿ,ದೊಡ್ಡಬಳ್ಳಾಪುರ ನಗರದಲ್ಲಿ ಕಳೆದ 30 ವರ್ಷಗಳಿಂದ ನಿಯಮ ಉಲ್ಲಂಘಿಸಿ ಖಾತೆಗಳಾಗಿದ್ದರಿಂದ ನಗರಸಭೆಯ ಸಂಪನ್ಮೂಲಕ್ಕೆ ನಷ್ಟವಾಗಿದೆ.ಆಸ್ತಿ ತೆರಿಗೆಯಲ್ಲಿ ಸಾಕಷ್ಟು ಲೋಪದೋಷಗಳಿಂದ ಆಸ್ತಿ ತೆರಿಗೆ ವಸೂಲಿಯಲ್ಲಿ ಸೋರಿಕೆಯಾಗಿದೆ.ದಿನಬೆಳಗಾಯಿತೆಂದರೆ ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು ಅಧಿಕಾರಿಗಳು ಕೂಡ ಸಾರ್ವಜನಿಕರ ಕೆಲಸಗಳನ್ನು ಕಡೆಗಣಿಸಿ ದಲ್ಲಾಳಿಗಳ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ, ಇಲ್ಲಿ ಅಧಿಕಾರಿಗಳ ಕೆಲಸ ಕ್ಕಿಂತ ಅನದಿಕೃತ ನೌಕರರದೆ ಕಾರುಬಾರು ಹೆಚ್ಚಾಗಿದೆ. ಈ ಖಾತೆ ಹೆಸರಿನಲ್ಲಿ ಲಂಚಗುಳಿತನ ಮಿತಿ ಮೀರಿದೆ.ಹಾಗಾಗಿ ಕಂದಾಯ ವಿಭಾಗದಿಂದ ಸಾರ್ವಜನಿಕರ ಪ್ರತಿಯೊಂದು ಕೆಲಸಕ್ಕೂ ಲಂಚ ಕೊಡದೆ ಕೆಲಸವಾಗುತಿಲ್ಲವೆಂಬುದು ನಗರದಲ್ಲಿ ಸಾರ್ವತ್ರಿಕ ಅಭಿಪ್ರಾಯವಾಗಿದೆ.ನಗರಸಭೆಗೆ ಸಂಪನ್ಮೂಲಗಳ ಮೂಲವಾದ ವಾಣಿಜ್ಯ ಕಟ್ಟಡಗಳ ತೆರಿಗೆಯಲ್ಲಿ ಬಾರಿ ಲೋಪಗಳಾಗಿದ್ದು ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳು ಹೆಚ್ಚು ಕೈ ಆಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.ಕಂದಾಯ ವಿಭಾಗ ಒಂದರಲ್ಲೆ ಇಷ್ಟೊಂದು ನ್ಯೂನತೆಗಳಿದ್ದರೆ ಇನ್ನು ಬೇರೆ ವಿಭಾಗಗಳಲ್ಲಂತು ಕೇಳುವಂತೆಯೇ ಇಲ್ಲ ಎಂದ ಮುರುಳಿಮೋಹನ್ ಇಷ್ಟೆಲ್ಲಾ ಭ್ರಷ್ಟಾಚಾರ ನಡೆಯುತಿದ್ದರೂ ಕೂಡ ನಗರಸಭೆಯ ಉನ್ನತ ಮಟ್ಟದ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ನಗರಸಭೆಯ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ ಕೆಲವು ನಗರಸಭಾ ಸದಸ್ಯರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲವೆಂದು ಸದಸ್ಯರು ಆಕ್ರೋಶಗೊಂಡಿದ್ದಾರೆ ಈ ಬಗ್ಗೆ ಊರಿನ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಗರಸಭೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ದ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದೇವೆ.ಮುಂಬರುವ ದಿನಗಳಲ್ಲಿ ನಗರಸಭೆ ಅಧಿಕಾರಿ ವರ್ಗದಿಂದ ಇದೇ ರೀತಿ ಜನವಿರೋಧಿ ದೋರಣೆ ಅನುಸರಿಸಿದರೆ ನಮ್ಮ ಸಂಘಟನೆ ವತಿಯಿಂದ ಹೋರಾಟಗಳು ಮುಂದುವರೆಯುತ್ತವೆ. ಜೊತೆಗೆ ಜಿಲ್ಲಾ ಹಾಗೂ ರಾಜ್ಯಮಟ್ಟದ ಇಲಾಖೆಗಳ ಅಧಿಕಾರಿಗಳಿಗೆ ದೂರನ್ನು ಕೊಟ್ಟು ಕ್ರಮಕ್ಕೆ ಒತ್ತಾಯಿಸುವ ಕೆಲಸವನ್ನು ನಮ್ಮ ಸಂಘಟನೆ ಹಮ್ಮಿಕೊಳ್ಳಲಿದೆ ಎಂದು ಮುರುಳಿಮೋಹನ್ ಹೇಳಿದರು.
ಪ್ರತಿಭಟನೆ ನಂತರ ಸಂಘಟನೆಯ ವತಿಯಿಂದ ಸುಮಾರು ಹದಿನೆಂಟು ಅಂಶಗಳ ಮನವಿ ಪತ್ರವನ್ನು ನಗರಸಭೆ ಪೌರಾಯುಕ್ತರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಂಜುನಾಥ್,ತಾಲ್ಲೂಕು ಸಂಚಾಲಕರಾದ ಎಂ ಗಂಗಾಧರ್,ಮುಖಂಡರಾದ ಮುನಿಸ್ವಾಮಿ,ಮುನಿಯಪ್ಪ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು