ವಾಹನ ಸವಾರರ ಸುರಕ್ಷತೆಗೆ ಒತ್ತು ಕೊಡುವಂತೆ ಕರವೇ ಯಿಂದ ಹುಲಿಕುಂಟೆ ಟೋಲ್ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಕೆ

ದೊಡ್ಡಬಳ್ಳಾಪುರ:ಟೋಲ್ ಸಿಬ್ಬಂದಿಗಳು ಕೇವಲ ಹಣ ಸಂಗ್ರಕ್ಕೆ ಸೀಮಿತವಾಗದೆ, ವಾಹನ ಸವಾರರ ಸುರಕ್ಷತೆ ಕಡೆಗೂ ಹೆಚ್ಚು ಒತ್ತು ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಯ ಪದಾಧಿಕಾರಿಗಳು ಹುಲಿಕುಂಟೆ ಟೋಲ್‌ ಸಿಬ್ಬಂದಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದಿಂದ ದಾಬಸ್‌ ಪೇಟೆ ವರೆಗೆ ಟೋಲ್ ರಸ್ತೆ ನಿರ್ಮಿಸಿದ್ದು, ಟೋಲ್ ಸಂಗ್ರಹ ಕೂಡ ಮಾಡುತ್ತಿದ್ದೀರಿ ಆದರೆ ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಮಿತಿಮೀರಿ ವಾಹನಗಳ ಅಪಘಾತಗಳು ಸಂಭವಿಸುತ್ತಿವೆ.

ಕಳೆದ ಒಂದು ವಾರದಲ್ಲಿ ಸುಮಾರು ಐದು ವಾಹನಗಳು ಅಪಘಾತ ಕ್ಕೀಡಾಗಿವೆ ಸುಮಾರು ಹದಿನೈದಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ ನೀವು ಯಾವುದೇ ಪರಿಶೀಲನೆ ನಡೆಸದೆ ಅಪಘಾತ ತಡೆಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದೀರಿ, ಅಪಘಾತ ವಲಯದಲ್ಲಿ ಆಂಬ್ಯಲೆನ್ಸ್‌ ಸೇವೆ ಕೂಡ ಸಮರ್ಪಕವಾಗಿ ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೆ ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳು, ಪೋಲಿಸ್ ಇಲಾಖೆಯ ಜೊತೆಯಲ್ಲಿ ರಸ್ತೆ ಪರಿಶೀಲನೆ ನಡೆಸಿ ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ನಿಮ್ಮ ಟೋಲ್ ಸಂಗ್ರಹ ಕೇಂದ್ರಕ್ಕೆ ಸ್ಥಳೀಯ ಸಾರ್ವಜನಿಕರೊಂದಿಗೆ ಟೋಲ್ ಸಂಗ್ರಹ ಕೇಂದ್ರಕ್ಕೆ ಮುತ್ತಿಗೆ ಹಾಕಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಟೋಲ್‌ ಪ್ಲಾಜಾ ವ್ಯವಸ್ಥಾಪಕ ಪ್ರಶಾಂತ್‌, ಈ ಕುರಿತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಾಹಿತಿ ನೀಡಿ, ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ಮುಖಂಡರಾದ ನವೀನ್, ಮೋಹನ್, ಫಯಾಝ್, ರಘು, ಮಂಜು, ಸಮೀ‌ರ್ ಮುಂತಾದವರು ಉಪಸ್ಥಿತರಿದ್ದರು.