ಜಿಲ್ಲಾ ವ್ಯಾಪ್ತಿಯಲ್ಲಿ ಅರಣ್ಯ ಬೆಂಕಿ ಪ್ರಕರಣಗಳನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮ
ಚಾಮರಾಜನಗರ:ಜಿಲ್ಲಾಡಳಿತದ ವತಿಯಿಂದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಆಗ್ನಿಶಾಮಕ ಇಲಾಖೆ, ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಹಾಗೂ ಕಂದಾಯ ಇಲಾಖೆ ಸಮನ್ವಯದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅರಣ್ಯ ಬೆಂಕಿ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ಸಭೆಯನ್ನು ಆಯೋಜಿಸಲಾಯಿತು.
ಜಿಲ್ಲಾಧಿಕಾರಿಗಳು, ಚಾಮರಾಜನಗರ ಜಿಲ್ಲೆ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಚಾಮರಾಜನಗರ ವೃತ್ತ ರವರ ಜಂಟಿ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ ಸಭೆ ನಡೆಯಿತು.
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯು ಸುಮಾರು ಶೇಕಡ 52ರಷ್ಟು ಅರಣ್ಯ ಪ್ರದೇಶದಿಂದ ಕೂಡಿದ್ದು, ವನ್ಯಜೀವಿ ಹಾಗೂ ನೈಸರ್ಗಿಕ ಸಂಪತ್ಭರಿತವಾದ ಜಿಲ್ಲೆಯಾಗಿದೆ. ಹಾಗೆಯೇ, ಪ್ರಕೃತಿ ವಿಕೋಪಗಳಲ್ಲಿ ಒಂದಾದ ಅರಣ್ಯ ಬೆಂಕಿಯಿಂದ ನಮ್ಮ ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವುದು ಕೇವಲ ಅರಣ್ಯ ಇಲಾಖೆಯ ಕಾರ್ಯವಾಗದೇ ಸರ್ಕಾರದ ಭಾಗವಾಗಿರುವ ವಿವಿಧ ಇಲಾಖೆಗಳ ಮತ್ತು ಸಾರ್ವಜನಿಕರ ಮೂಲಭೂತ ಕರ್ತವ್ಯವಾಗಿರುವುದರಿಂದ ಜಿಲ್ಲಾಡಳಿತ ವತಿಯಿಂದ 2025ನೇ ಸಾಲಿನ ಅರಣ್ಯ ಬೆಂಕಿ ಕಾಲದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅರಣ್ಯ ಬೆಂಕಿ ಪ್ರಕರಣಗಳನ್ನು ತಡೆಗಟ್ಟಲು ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಲ್ಲಿ ಸೂಕ್ತ ಸಹಕಾರ ಹಾಗೂ ನಿರ್ದೇಶನಗಳನ್ನು ನೀಡಲು ಸಭೆಯಲ್ಲಿ ಕೋರಿದರು.
ಅರಣ್ಯ ಪ್ರದೇಶವು ರಾಷ್ಟ್ರೀಯ ನೈಸರ್ಗಿಕ ಸಂಪತ್ತಾಗಿದ್ದು, ಅರಣ್ಯ, ವನ್ಯಜೀವಿ ಹಾಗೂ ಪರಿಸರ ರಕ್ಷಣೆ ಕೇವಲ ಅರಣ್ಯ ಅಧಿಕಾರಿಗಳ ಜವಾಬ್ದಾರಿಯಾಗಿರದೇ ಎಲ್ಲಾ ಇಲಾಖೆಗಳ ಜಂಟಿ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಪೊಲೀಸ್, ಅಗ್ನಿಶಾಮಕ, ಗಿರಿಜನ ಕಲ್ಯಾಣ ಅಧಿಕಾರಿ ಹಾಗೂ ಇನ್ನಿತರೆ ಎಲ್ಲಾ ಸಂಬಂಧಿಸಿದ ಇಲಾಖೆಗಳು ಅರಣ್ಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸದರಿ ರಾಷ್ಟ್ರೀಯ ಸಂಪತ್ತನ್ನು ಸಂರಕ್ಷಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅರಣ್ಯ ಬೆಂಕಿಯನ್ನು ತಡೆಗಟ್ಟಲು ತೆಗೆದುಕೊಳ್ಳಲಾದ ಬೆಂಕಿರೇಖೆ ನಿರ್ಮಾಣ, ಬೆಂಕಿರೇಖೆ ನಿರ್ವಹಣೆ, ಬೆಂಕಿ ಕಾವಲುಗಾರರ ನಿಯೋಜನೆ ಮುಂತಾದ ಕ್ರಮಗಳನ್ನು ವಿವರಿಸುತ್ತಾ, ಕಳೆದ ಸಾಲಿನಲ್ಲಿ ಹೆಚ್ಚಿನ ಅರಣ್ಯ ಪ್ರದೇಶವು (172.67 ಹೆಕ್ಟೇರ್) ಬೆಂಕಿಗೆ ಆಹುತಿಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಲ್ಲಿ ಅರಣ್ಯ ಬೆಂಕಿಯನ್ನು ತಡೆಗಟ್ಟಬಹುದಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ರವರು ಸಭೆಗೆ ತಿಳಿಸಿದರು.
ಪೊಲೀಸ್ ಅಧಿಕಾರಿ/ ಸಿಬ್ಬಂದಿ ವರ್ಗದವರೊಂದಿಗೆ ಗಿರಿಜನ ಹಾಡಿಗಳಲ್ಲಿ ಸಭೆ ನಡೆಸಿ ಉದ್ದೇಶಪೂರ್ವಕವಾಗಿ ಅರಣ್ಯಕ್ಕೆ ಬೆಂಕಿ ನೀಡುವವರ ವಿರುದ್ದ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡುವ ಮೂಲಕ ಹಾಗೂ ಅರಣ್ಯ ಬೆಂಕಿ ಉಂಟಾದಲ್ಲಿ ಅಗ್ನಿಶಾಮಕ ಇಲಾಖೆಯವರು ಬೆಂಕಿ ನಂದಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆಗೆ ಸಹಕಾರ ನೀಡುವಂತೆ ತಿಳಿಸಲಾಯಿತು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮಾತನಾಡಿ ಕಳೆದ ಬಾರಿ ಅರಣ್ಯ ಬೆಂಕಿ ಸಂಭವಿಸಿದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸದರಿ ಗಿರಿಜನ ಪೋಡುಗಳಿಗೆ ಪೋಲೀಸ್ ಅಧಿಕಾರಿ ಹಾಗೂ ಗಿರಿಜನ ಕಲ್ಯಾಣಾಧಿಕಾರಿಗಳನ್ನೊಳಗೊಂಡಂತೆ ಸಂಬಂಧಿಸಿದ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಅರಣ್ಯ ಬೆಂಕಿ ಕುರಿತು ಅರಿವು ಮೂಡಿಸಲು ತಿಳಿಸಿದರು. ಮೂರು ಇಲಾಖೆಗಳನ್ನು ಒಳಗೊಂಡಂತೆ ತಾಲ್ಲೂಕುವಾರು ತಂಡಗಳನ್ನು ರಚಿಸಿ ಕೂಡಲೇ ಗಿರಿಜನ ಪೋಡು ಭೇಟಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳು ಸಭೆಯನ್ನುದ್ದೇಶಿಸಿ ಮಾತನಾಡಿ ಹಲವು ಇಲಾಖೆಗಳನ್ನು ಒಳಗೊಂಡಂತೆ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಿ ಅರಣ್ಯ ಬೆಂಕಿ ಸಂಭವಿಸಿದಲ್ಲಿ ಬೆಂಕಿ ತಡೆಗಟ್ಟಲು ಕ್ರಮವಹಿಸುವಂತೆ ಸಭೆಯಲ್ಲಿ ನಿರ್ದೇಶನ ನೀಡಿದರು. ಅಗತ್ಯವಿದ್ದಲ್ಲಿ ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ನಿಧಿಯಡಿ ಅರಣ್ಯ ಬೆಂಕಿ ತಡೆಗಟ್ಟಲು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.
ಕಳೆದ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಸಂಭವಿಸಿದ ಅರಣ್ಯ ಬೆಂಕಿ ಪ್ರಕರಣಗಳ ಕುರಿತು ವಿಷಾಧ ವ್ಯಕ್ತಪಡಿಸಿ ಪ್ರಸಕ್ತ ಸಾಲಿನಲ್ಲಿ ಅರಣ್ಯ ಬೆಂಕಿ ತಡೆಗಟ್ಟಲು ಅರಣ್ಯ ಇಲಾಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸಭೆಯಲ್ಲಿದ್ದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೈಮಹದೇಶ್ವರ ವನ್ಯಜೀವಿ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾವೇರಿ ವನ್ಯಜೀವಿ ವಿಭಾಗ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗಾಧಿಕಾರಿ, ವಿಭಾಗಗಳ ಪೊಲೀಸ್ ಉಪ ಅಧೀಕ್ಷಕರು, ಜಿಲ್ಲೆಯ ಎಲ್ಲಾ ವಲಯ ಅರಣ್ಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.