ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರಿಗೆ ಶ್ರದ್ಧಾಂಜಲಿ

ದೊಡ್ಡಬಳ್ಳಾಪುರ :ದೇಶ ಕಂಡ ಆರ್ಥಿಕ ಸುಧಾರಣೆಯ ಹರಿಕಾರ ಭಾರತದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕನ್ನು ತೋರಿಸಿದ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಅಪ್ರತಿಮ ಆರ್ಥಿಕ ತಜ್ಞರಾಗಿದ್ದರು. ಅವರ ಅವದಿಯಲ್ಲಿ ಇಡೀ ವಿಶ್ವವೇ ಅರ್ಥಿಕ ಸಂಕಷ್ಟ ಎದುರಿಸಿದರೂ ಭಾರತ ಮಾತ್ರ ಆರ್ಥಿಕತೆಯಲ್ಲಿ ಸ್ಥಿರತೆಯನ್ನು ಉಳಿಸಿಕೊಂಡಿತ್ತು ಎಂದು ಕೆಪಿಸಿಸಿ ಸದಸ್ಯ ಹೇಮಂತ ರಾಜ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. 1972ರಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡ ಮನಮೋಹನ್ ಸಿಂಗ್ ಅವರು 1991ರಲ್ಲಿ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ಅದಕ್ಕೂ ಮೊದಲು ಹಣಕಾಸು ಕಾರ್ಯದರ್ಶಿ, ಯೋಜನಾ ಆಯೋಗದ ಸದಸ್ಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ – ಇತರ ಮಹತ್ವದ ಆರ್ಥಿಕ ಸ್ಥಾನಗಳನ್ನು ಯಶಸ್ವಿಯಾಗಿ ನಿಭಾಯಿಸಿದ ವ್ಯಕ್ತಿ ಸಿಂಗ್ ಅವರು ಎಂದರು.

2004 ರಲ್ಲಿ ಪ್ರಧಾನಮಂತ್ರಿ ಪದವಿಗೆ ಏರಿ ಒಂದು ದಶಕಗಳ ಕಾಲ ತಮ್ಮ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೆಲವು ಉತ್ತಮ ಸಾಧನೆಗಳ ಹೊರತಾಗಿಯೂ ಅಂದಿನ ಖಾಸಗೀಕರಣ ಕುರಿತ ಆರ್ಥಿಕ ನೀತಿಯು ಎಡಪಕ್ಷಗಳು ಸೇರಿದಂತೆ ಜನಪರ ಸಂಘಟನೆಗಳಿಂದ ವಿರೋಧ ಎದುರಿಸಿತ್ತು. ಆದರೂ ಅವರ ಸರ್ಕಾರವು ಮಾಹಿತಿ ಹಕ್ಕು (ಆರ್ ಟಿಐ), ಆಹಾರ ಭದ್ರತಾ ಕಾಯ್ದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್ಆರ್ಇಜಿಎ), ಮತ್ತು ಶಿಕ್ಷಣ ಹಕ್ಕು (ಆರ್ ಟಿಇ) ನಂತಹ ಸುಧಾರಣಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಭಾಗದ ರೈತರಿಗೆ ವರಧಾನವಾಯಿತು ಎಂದರು.

ಈ ಸಂದರ್ಭದಲ್ಲಿ ಕಸಬಾ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಡಿಪಿಎ ನಿರ್ದೇಶಕ ಆನಂದಮೂರ್ತಿ,ಯುವ ಕಾಂಗ್ರೆಸ್ ನ ರಾಜೇಶ್ ಜವಾಜಿ, ಗ್ಯಾರಂಟಿ ಯೋಜನೆ ಅನುಷ್ಠಾನದ ನಿರ್ದೇಶಕರಾದ ಶ್ರೀನಗರ ಬಶೀರ್, ಬಲ್ಬು ಶ್ರೀನಿವಾಸ್, ನಗರಸಭಾ ಸದಸ್ಯರಾದ ಆನಂದ್, ರೊಪಿಣಿ ಮಂಜುನಾಥ್, ವಾಣಿ, ನಾಗವೇಣಿ, ಎಸ್ಸಿ ಎಸ್ಟಿ ಅಧ್ಯಕ್ಷ ಮುನಿರಾಜು, ಎಸ್ಸಿ ಕಸಬಾ ಘಟಕದ ಅಧ್ಯಕ್ಷರಾದ ಕೆಂಪಣ್ಣ, ದೊಡ್ಡಯ್ಯ, ಕೆವಿ ನಾಗೇಶ್, ಮುಖಂಡರಾದ ರಾಘವ, ನಾಗರಾಜು, ನಾಗಸಂದ್ರ ಶಿವಕುಮಾರ್, ಮುನಿರಾಜು, ಎಸ್ಟಿ ಘಟಕದ ವೆಂಕಟೇಶ್, ಲಕ್ಷ್ಮೀಪತಿ ಉಪಸ್ಥಿತರಿದ್ದರು.