*ದೇಶದ ಪ್ರತಿಯೊಬ್ಬ ನಾಗರಿಕರ ರಕ್ಷಣೆಗಾಗಿ ಸಂವಿಧಾನ ರಚನೆ : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ*
ಚಾಮರಾಜನಗರ:ದೇಶದ ನಾಗರಿಕರ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸಿ ಸಂವಿಧಾನದಲ್ಲಿ ಅಳವಡಿಸಲಾಗಿದ್ದು, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಚಾಮರಾಜನಗರ ವಿಶ್ವವಿದ್ಯಾನಿಲಯದ ನಿಜಗುಣ ಸಭಾಂಗಣದಲ್ಲಿಂದು ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆ-75’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯದಿಂದಲೇ ಅನುಭವಿಸಿದ್ದ ಕಷ್ಟಜೀವನ ಮೆಟ್ಟಿನಿಂತ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶ ಕಲ್ಪಿಸಲು ಆದ್ಯತೆ ನೀಡಿದರು. ಮಹಾರಾಷ್ಟ್ರದಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ಕಾನೂನು ಇದೆ. ಸಾಮಾಜಿಕ ಬಹಿಷ್ಕಾರ ಪಿಡುಗು ನಿವಾರಣೆಗೆ ಅದೇ ಮಾದರಿಯ ಪರಿಣಾಮಕಾರಿ ಕಾನೂನು ಇಲ್ಲಿಯೂ ಅಗತ್ಯವಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಅಭಿಪ್ರಾಯಪಟ್ಟರು.
ಮುಖ್ಯಭಾಷಣ ಮಾಡಿದ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎಸ್.ಎ. ಅಹಮದ್ ಅವರು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಜೊತೆಗೆ ಸಹೋದರತೆ ಸಂವಿಧಾನದ ಆಶಯವಾಗಿದೆ. ದೇಶದಲ್ಲಿರುವ ನೂರಾರು ಭಾಷೆ, ಧರ್ಮ, ವಿಭಿನ್ನ ಸಂಸ್ಕøತಿಗಳನ್ನು ಸಹೋದರತ್ವದ ಆಧಾರದಡಿ ಬೆಸೆಯುವ ಕೆಲಸವನ್ನು ಸಂವಿಧಾನ ಮಾಡುತ್ತಿದೆ. ದೇಶದ 140 ಕೋಟಿ ಜನರಿಗೂ ಸಮಾನ ಅವಕಾಶಗಳನ್ನು ಒದಗಿಸಲು ಭದ್ರ ಅಡಿಪಾಯವಾಗಿ ಸಂವಿಧಾನ ನಿಂತಿದೆ. ಸಂವಿಧಾನ ಸಮರ್ಪಣೆಯ 75 ವರ್ಷಗಳ ಸಂಕ್ರಮಣ ಕಾಲದಲ್ಲಿರುವ ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಓದಬೇಕು. ಜವಾಬ್ದಾರಿಯುತ ನಾಗರಿಕರಾಗಿ ಉತ್ತಮ ಸಮಾಜ ಕಟ್ಟಬೇಕು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಪ್ರಖರ ಬೌದ್ಧಿಕ ಸಾಮಥ್ರ್ಯ, ಇಚ್ಛಾಶಕ್ತಿ, ಹಾಗೂ ನಿರಂತರ ಅಧ್ಯಯನ ಶೀಲತೆಯಿಂದ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನ ಜಾರಿಯಾಗಿ ಜನರ ಬದುಕಿಗೆ ಅರ್ಥ ಸಿಕ್ಕಿದೆ. ನಮ್ಮೆಲ್ಲರ ಆಶಯಗಳಿಗೆ ಅಕ್ಷರರೂಪ ದೊರೆತಿದೆ. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ದೇಶ ರಚನಾತ್ಮಕ ಬೆಳವಣಿಗೆ ಹೊಂದಲು ಸಂವಿಧಾನ ನೇರ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಕಲಾ ವಿಷಯ ಹೊರತುಪಡಿಸಿ ಇನ್ನುಳಿದ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ವಾಣಿಜ್ಯ ವಿದ್ಯಾರ್ಥಿಗಳು ದೇಶದ ಇತಿಹಾಸ, ಸಂವಿಧಾನದ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು. ಇಂದಿನ ವಿದ್ಯಾರ್ಥಿಗಳು, ಯುವಕರು ಮೊಬೈಲ್ ಸಂಸ್ಕøತಿಗೆ ಮಾರುಹೋಗಬಾರದು. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾಂವಿಧಾನಿಕ ಗ್ರಂಥಾಲಯ ರಚನೆಯಾಗಬೇಕು ಎಂದು ಎಸ್.ಎ. ಅಹಮದ್ ಅವರು ಹೇಳಿದರು.
ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ ಸ್ವಾತಂತ್ರ್ಯ ನಂತರ ಪ್ರಬುದ್ಧ ದೇಶ ಕಟ್ಟಲು ಸಂವಿಧಾನ ಅಗತ್ಯವಾಗಿದ್ದ ಸಮಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೃಹತ್, ಹಾಗೂ ಲಿಖಿತ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಪ್ರಪಂಚದ ಯಾವುದೇ ದೇಶದಲ್ಲಿಯೂ ಇಷ್ಟುದೊಡ್ಡ ಸಂವಿಧಾನ ಚಾಲ್ತಿಯಲ್ಲಿಲ್ಲ ಎಂದರೇ ತಪ್ಪಾಗಲಾರದು. ಸಂವಿಧಾನದ ಪ್ರಜಾಸತ್ಯಾತ್ಮಕ ಮೌಲ್ಯ, ಆಶಯಗಳನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಅವರು ಮಾತನಾಡಿ ಭಾರತದ ಪ್ರಜೆಗಳಾಗಿ ನಾವು ಸಂವಿಧಾನದ ಆಶಯಗಳನ್ನು ಗೌರವಿಸಬೇಕು. ಕಾನೂನುಗಳನ್ನು ಪಾಲಿಸಬೇಕು. ಇಂದಿನ ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಬೇಕು. ಆಗಮಾತ್ರ ನಾವೆಲ್ಲರೂ ಜವಾಬ್ದಾರಿಯುವ ನಾಗರಿಕರಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ನಮ್ಮ ಸಂವಿಧಾನ ಇತರೆ ದೇಶಗಳಿಗೂ ಮಾದರಿಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ವಿದ್ವತ್ತು, ಅಪಾರ ಪರಿಶ್ರಮದಿಂದ ವಿಶ್ವಶ್ರೇಷ್ಠರಾದರು. ಪರಿಶಿಷ್ಟಜಾತಿ ಮತ್ತು ಪಂಗಡ ಸಮುದಾಯಗಳಿಗೆ ಮಾತ್ರ ಕಾನೂನು ರಚಿಸಲಿಲ್ಲ. ದೇಶದ ಎಲ್ಲಾ ವರ್ಗದವರಿಗೂ ಸಮಾನ ಪ್ರಾತಿನಿಧ್ಯ ನೀಡಿದ್ದಾರೆ. ಮಹಾನ್ ಸ್ವಾಭಿಮಾನಿಯಾಗಿದ್ದ ಅಂಬೇಡ್ಕರ್ ಅವರು ಉತ್ತಮ ವಿಚಾರಗಳಲ್ಲಿ ಎಂದಿಗೂ ರಾಜೀಯಾಗುತ್ತಿರಲಿಲ್ಲ. ಅವರ ಅಚಲ ನಿರ್ಧಾರಗಳು ಸಂವಿಧಾನದಲ್ಲಿ ಸಾರ್ವಕಾಲಿಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಂವಿಧಾನದ ಪಾತ್ರ’ ಕುರಿತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭೌತಶಾಸ್ತ್ರ ವಿಭಾಗದ ಮಲ್ಲೇಶ್, ದ್ವಿತೀಯ ಸ್ಥಾನ ಪಡೆದ ಕನ್ನಡ ವಿಭಾಗದ ಅನಿತಾ ಹಾಗೂ ತೃತೀಯ ಸ್ಥಾನ ಪಡೆದ ರಾಜ್ಯಶಾಸ್ತ್ರ ವಿಭಾಗದ ರೋಜಾ ಅವರಿಗೆ ಸ್ಮರಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಇದೇ ವೇಳೆ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ವಿಶ್ವವಿದ್ಯಾನಿಲಯದಲ್ಲಿ ಸಾಂವಿಧಾನಿಕ ಗ್ರಂಥಾಲಯ ತೆರೆಯಲು 10 ಸಾವಿರ ರೂ. ಗಳ ದೇಣಿಗೆ ನೀಡಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ (ಮೌಲ್ಯಮಾಪನ ಕುಲಸಚಿವರಾದ ಪ್ರೊ. ಜಿ.ವಿ. ವೆಂಕಟರಮಣ, ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ವಿ.ಜಿ. ಸಿದ್ದರಾಜು, ಜಿಲ್ಲಾ ಸರ್ಕಾರಿ ವಕೀಲರು ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯದ ಕಾನೂನು ಸಲಹೆಗಾರರಾದ ಆರ್. ಅರುಣ್‍ಕುಮಾರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ