ಇನ್ಫೋಸಿಸ್ ಸಂಸ್ಥೆಯಿಂದ ಉಚಿತ ಟ್ಯಾಬ್ ವಿತರಣೆ

ಚಾಮರಾಜನಗರ:ಪ್ರಜಾಪ್ರಭುತ್ವದ ಆಶಯದಡಿ ಶಿಕ್ಷಣವನ್ನು ಎಲ್ಲಾ ಮಕ್ಕಳಿಗೂ ಸಮಾನವಾಗಿ ಹಂಚುವ ಸಾಮಾಜಿಕ ಜವಾಬ್ದಾರಿಯನ್ನು ಇನ್‍ಫೋಸಿಸ್ ಸಂಸ್ಥೆ ಹೊಂದಿದೆ ಎಂದು ಸಂಸ್ಥೆಯ ಸಂಯೋಜನಾಧಿಕಾರಿ ಸಂತೋಷ್ ಅನಂತಪುರ ಅವರು ತಿಳಿಸಿದರು.

ಚಾಮರಾಜನಗರ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಶಾಲೆಯಲ್ಲಿ ಡಿಜಿಟಲ್ ಶಿಕ್ಷಣ ಬಲವರ್ಧನೆ ಹಾಗೂ 3ನೇ ಹಂತದ ಉಚಿತ ಟ್ಯಾಬ್ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಕೆಲ ಶಾಲೆಗಳಿಗೆ ಸಾಂಕೇತಿಕವಾಗಿ ಟ್ಯಾಬ್ ವಿತರಿಸಿ ಅವರು ಮಾತನಾಡಿದರು.

ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಇನ್‍ಪೋಸಿಸ್ ಸಂಸ್ಥೆ ಕಟಿಬದ್ಧವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಸ್ಪ್ರಿಂಗ್‍ಬೋರ್ಡ್ ಮೂಲಕ ಕಲಿಯಲು ಅನುಕೂಲವಾಗುವಂತೆ ಈಗಾಗಲೇ 120 ಸ್ವಾರ್ಟ್ ಟಿ.ವಿ ಹಾಗೂ 1800 ಟ್ಯಾಬ್‍ಗಳನ್ನು ವಿತರಿಸಲಾಗಿದೆ. ಸ್ವಾರ್ಟ್ ಟಿವಿ, ಟ್ಯಾಬ್ ನೀಡಿದರೇ ಸಂಸ್ಥೆಯ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ. ಕಲಿಕಾ ಪ್ರಗತಿ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೊಡುಗೆ ನೀಡಲಾಗುವುದು. ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು ಈ ಸದಾವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ವಿದ್ಯಾರ್ಥಿಗಳು ಒಂದೇ ಚೌಕಟ್ಟಿನೊಳಗೆ ಕಲಿಯಲು ಸಾಧ್ಯವಿಲ್ಲ. ತುಂಬಾ ವೇಗವಾಗಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಇಂದಿನ ವಿದ್ಯಾರ್ಥಿಗಳಂತೆ ಶಿಕ್ಷಕರು ಕಲಿಯಬೇಕಾದ ಅವಶ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಟ್ಯಾಬ್‍ನಲ್ಲಿರುವ ಆಪ್‍ಗಳ ಕಲಿಕೆಗೆ ಭಾಷೆ ತೊಡಕಾಗುವುದಿಲ್ಲ. ಮುಖ್ಯವಾಗಿ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕಲಿಯುವ ಅಸಕ್ತಿ ಇರಬೇಕು. ಸ್ಪ್ರಿಂಗ್‍ಬೋರ್ಡ್ ಮೂಲಕ ಕಲಿಯಲು ಪ್ರತಿದಿನ ಒಂದು ಗಂಟೆ ಮೀಸಲು ಅವಕಾಶ ಸಾಕಾಗಲಿದೆ. ಸಂಸ್ಥೆಯ ಅಧಿಕಾರಿಗಳ ತಂಡವು ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಗೆ, ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್ ಅವರು ಸ್ಪ್ರಿಂಗ್‍ಬೋರ್ಡ್ ಮೂಲಕ ಕಲಿಯಲು ಸಂಸ್ಥೆಯು ಸ್ವಾರ್ಟ್ ಟಿವಿ, ಟ್ಯಾಬ್ ವಿತರಿಸಿ ಜಿಲ್ಲೆಯ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಉತ್ತಮ ನೆರವು ನೀಡುತ್ತಿದೆ. ಸ್ವಾರ್ಟ್ ಟಿವಿ, ಟ್ಯಾಬ್ ವಿತರಣೆ ಮಾತ್ರವಲ್ಲ. ಶಾಲಾ ಕಟ್ಟಡ, ಶೌಚಾಲಯ ನಿರ್ಮಾಣ ಇನ್ನಿತರ ಅಭಿವೃದ್ಧಿ ಕಾರ್ಯಗಳಲ್ಲಿ ಸಂಸ್ಥೆ ಇಲಾಖೆಯ ಜೊತೆ ಕೈಜೋಡಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ವೆಂಕಟಯ್ಯನ ಛತ್ರ ಶಾಲೆಯಲ್ಲಿ ಹಾಗೂ 2ನೇ ಹಂತದಲ್ಲಿ ಮಲ್ಲಯ್ಯನಪುರದ ಆದರ್ಶ ಶಾಲೆಯಲ್ಲಿ ಸ್ವಾರ್ಟ್ ಟಿವಿ, ಟ್ಯಾಬ್ ವಿತರಿಸಲಾಗಿದೆ. ಇದು 3ನೇ ಹಂತದ ವಿತರಣಾ ಕಾರ್ಯಕ್ರಮವಾಗಿದೆ ಎಂದರು.

ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ನಮ್ಮ ಕಲಿಕಾ ವೇಗ ಇನ್ನೂ ಹೆಚ್ಚಾಗಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಕಬೇಕು. ಇನ್‍ಫೋಸಿಸ್ ಸಂಸ್ಥೆಯ ಅಧಿಕಾರಿಗಳು ಸಹ ಆಗಿಂದ್ದಾಗ್ಗೆ ಶಾಲೆಗಳಿಗೆ ಭೇಟಿನೀಡಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯನ್ನು ಪರಿಶೀಲಿಸಲಿದ್ದಾರೆ. ಶಿಕ್ಷಕರು, ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಇಲಾಖೆಯು ಸಂಸ್ಥೆಯೊಂದಿಗೆ 5 ವರ್ಷಗಳವರೆಗೆ ಒಪ್ಪಂದ ಮಾಡಿಕೊಂಡಿದೆ. ಸ್ವಾರ್ಟ್ ಟಿವಿ, ಟ್ಯಾಬ್‍ಗಳ ವೇಗ ಬಳಕೆಗಾಗಿ ಮುಂದಿನ ದಿನಗಳಲ್ಲಿ ಬಿ.ಎಸ್.ಎನ್.ಎಲ್ ಉಚಿತ ಹಾಗೂ ಅನಿಯಮಿತ ಅಂತರ್ಜಾಲ ವ್ಯವಸ್ಥೆ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ರಾಮಚಂದ್ರರಾಜೇ ಅರಸ್ ಅವರು ತಿಳಿಸಿದರು.

ಸ್ವಾರ್ಟ್ ಟಿವಿ, ಟ್ಯಾಬ್‍ಗಳ ಬಳಕೆ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಯ್ಯನಪುರದ ಆದರ್ಶ ಶಾಲೆಯ ಸಹ ಶಿಕ್ಷಕರಾದ ಶಾಲಿನಿ ಅವರು ವಿದ್ಯಾರ್ಥಿಗಳು ಪುಸ್ತಕದಿಂದ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ. ಕಲಿಕೆಗೆ ಇರುವ ಇತರೆ ಅವಕಾಶಗಳು ಹಾಗೂ ಪುಸ್ತಕಕ್ಕೆ ಪೂರಕವಾದ ಬೇರೆಬೇರೆ ಕೋರ್ಸ್‍ಗಳ ಬಗ್ಗೆಯು ಚಿಂತನೆ ನಡೆಸಬೇಕು. 3933 ಬ್ಲಾಗ್‍ಗಳು, 2 ಲಕ್ಷಕ್ಕೂ ಹೆಚ್ಚಿನ ಕೋರ್ಸ್‍ಗಳು, ಮಕ್ಕಳಿಗಾಗಿ 7 ಸಾವಿರ ಕಂಟೆಂಟ್‍ಗಳಿರುವ ಸ್ಪ್ರಿಂಗ್‍ಬೋರ್ಡ್ ಆಪ್ ಬಹುದೊಡ್ಡ ಸಾಗರವಾಗಿದೆ. ಆಪ್ ಅನ್ನು ಪರಿಪೂರ್ಣವಾಗಿ ಅರಿಯಲು ಶಿಕ್ಷಕರಿಗೆ ಪರಿಣಾಮಕಾರಿ ತರಬೇತಿಯ ಅಗತ್ಯವಿದೆ. ಅಂತರ್ಜಾಲ ವ್ಯವಸ್ಥೆಗೆ ವೇಗ ನೀಡಬೇಕು. ಸ್ಪ್ರಿಂಗ್‍ಬೋರ್ಡ್ ಆಪ್ ಸುಲಭೀಕರಣಗೊಳಿಸಬೇಕು. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಲಿದೆ ಎಂದರು.

ಸ್ಪ್ರಿಂಗ್‍ಬೋರ್ಡ್ ಮೂಲಕ ಕಲಿಯಲು ಇನ್‍ಫೋಸಿಸ್ ಸಂಸ್ಥೆಯು ನೀಡಿರುವ ಸ್ವಾರ್ಟ್ ಟಿವಿ, ಟ್ಯಾಬ್ ಬಳಕೆ ಹಾಗೂ ಉಪಯೋಗ ಕುರಿತು ಚಾಮರಾಜನಗರದ ಮಲ್ಲಯ್ಯನಪುರದ ಆದರ್ಶ ಶಾಲೆ ಹಾಗೂ ಕೊಳ್ಳೇಗಾಲದ ಎಸ್.ವಿ.ಕೆ. ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಅನುಭವ ಹಂಚಿಕೊಂಡರು.

ಇನ್‍ಫೋಸಿಸ್ ಸಂಸ್ಥೆಯ ವ್ಯವಸ್ಥಾಪಕರಾದ ಡಾ. ಮೀನಾಕ್ಷಿ, ಪ್ರಶಾಂತ್ ಆಚಾರ್ಯ, ಬಿಳಿಗಿರಿರಂಗ, ದೀಪ್ತಾ ಪದ್ಮನಾಭನ್, ವಿನಯ್ ಸಂತು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ