ಕನಕ ದಾಸರು ನಾಡಿಗೆ ನೀಡಿದ ಕೊಡುಗೆ ಅಪಾರ– ಶಾಸಕ-ಧೀರಜ್ ಮುನಿರಾಜು

ದೊಡ್ಡಬಳ್ಳಾಪುರ–ದಾಸಶ್ರೇಷ್ಠ ಕನಕ ದಾಸರ ಭಕ್ತಿ ಅನನ್ಯವಾದುದು. ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಭಕ್ತರಿಗೆ ದೇವಾಲಯದ ಕನಕನ ಕಿಂಡಿಯ ಮೂಲಕವೇ ಆಗುತ್ತದೆ ಎಂದರೆ ಕನಕರ ಭಕ್ತಿಯ ಅಗಾದತೆ ಎಷ್ಟು ಎಂಬುದು ತಿಳಿಯುತ್ತದೆ. ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಆಡಳಿತದಿಂದ ನಡೆದ ಸಂತ ಶ್ರೇಷ್ಠ ಕನಕದಾಸರ 537ನೇ ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಧೀರಜ್ ಮುನಿರಾಜು ದಾಸರಲ್ಲಿ ಶ್ರೇಷ್ಠ ಕನಕದಾಸರು ನಾಡಿಗೆ ನೀಡಿದ ಕೊಡುಗೆ ಅಪಾರ. ವರ್ಣ ಭೇದ, ವರ್ಗ ಬೇದ ನೀತಿಯ ವಿರುದ್ಧ ಹೋರಾಡಿದ ಕನಕದಾಸರು ಕನ್ನಡ ಸಾಹಿತ್ಯಕ್ಕೆ ತನ್ನ ಕೀರ್ತನೆಗಳ ಮೂಲಕ ಹೊಸರೂಪವನ್ನು ತಂದು ಕೊಟ್ಟವರಲ್ಲಿ ಮೊದಲಿಗರು. ನಾವೆಲ್ಲ ಅವರ ಆದರ್ಶಗಳನ್ನು ಅನುಸರಿಸಬೇಕಾಗಿದೆ ಎಂದು ಧೀರಜ್ ಹೇಳಿದರು.
ನಗರ ಸಭೆ ಉಪಾಧ್ಯಕ್ಷ ರೈಲ್ವೆ ಸ್ಟೇಷನ್ ಮಲ್ಲೇಶ್ ಮಾತನಾಡಿ ಕನಕ ದಾಸರು ಸಂತರಾಗುವ ಮುನ್ನ ಪಾಳೇಗಾರರಾಗಿ ಉತ್ತಮ ಆಡಳಿತ ನೀಡಿದವರು. ಆದಿನೆಲೆ ಯಾದೀಶ ಚೆನ್ನಕೇಶವನ ಭಕ್ತರಾಗಿ ತನ್ನೆಲ್ಲ ಸಂಪತ್ತು ಸಾಮ್ರಾಜ್ಯವನ್ನು ಬಿಟ್ಟು ಸಂತ ರಾದವರು. ಅನಿಷ್ಟ ಜಾತಿ ಪದ್ಧತಿ ಯನ್ನು ವಿರೋಧಿಸಿದವರು. ಇವತ್ತಿಗೂ ಕೂಡಾ ಅವರ ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯ ಏನಾದರು ಬಲ್ಲಿರಾ… ಎಂಬ ಕೀರ್ತನೆ ಸರ್ವಕಾಲಿಕವಾದದ್ದು. ಅವರು ಒಂದು ಜಾತಿಗೆ ಸೀಮಿತವಾಗದೆ ಮಾನವರೆಲ್ಲ ಒಂದೇ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದವರು. 500ವರ್ಷಗಳ ಹಿಂದೆಯೇ ವರ್ಣ ದ್ವೇಷದ ವಿರುದ್ಧ ಹೋರಾಡಿದ ಕನಕ ದಾಸರ ಕೊಡುಗೆ ಅಪಾರವಾದುದು ಎಂದು ಹೇಳಿದರು.
ನಿಕಟ ಪೂರ್ವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮಾತನಾಡಿ ಕನಕ ದಾಸರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದುದು. ಅವರ ಉಘಾ, ಬೋಗಾದಿಗಳು, ಮುಂಡಿಗೆಗಳು, ಕೀರ್ತನೆಗಳು ಸರ್ವ ಕಾಲಕ್ಕೂ ಸಲ್ಲುವಂತಹವು. ಕನಕದಾಸರ ರಚನೆಗಳಾದ ರಾಮದಾನ್ಯ ಚರಿತ್ರೆ, ನಳ ಚರಿತ್ರೆ, ಮೋಹನ ತರಂಗಿಣಿ ಮುಂತಾದ ಕೃತಿಗಳು ಕನ್ನಡ ಸಾಹಿತ್ಯ ಲೋಕದ ಮೇರು ಕೃತಿಗಳು. ಅವರು ಕವಿ ಮಾತ್ರವಲ್ಲದೆ ಒಬ್ಬ ಗಟ್ಟಿ ಹೋರಾಟಗಾರರಾಗಿದ್ದಾವರು. ಪುರೋಹಿತ ಶಾಹಿ, ಹಾಗೂ ಅಸಮಾನತೆ ವಿರುದ್ಧ ಶತಮಾನಗಳ ಹಿಂದೆಯೇ ದ್ವನಿ ಎತ್ತಿ ಹೋರಾಟ ಮಾಡಿದುದು ಅತ್ಯಂತ ಗಮನಾರ್ಹವಾದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ವಿಭಾ ವಿದ್ಯಾ ರಾತೋಡ್, ರಾಷ್ಟ್ರಿಯ ಹಬ್ಬಗಳ ಆಚರಣ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಟನೆಗಳ ಮುಖಂಡರಾದ ಸಿ. ಗುರುರಾಜಪ್ಪ, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ, ಗ್ರಾ. ಪಂ ಸದಸ್ಯೆ ನಾಗರತ್ನಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಶೇಖರ್ ಹಾಗೂ ತಾಲೂಕು ಕುರುಬರ ಸಮಾಜದ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.