ಗ್ರಾಮ ಪಂಚಾಯಿತಿಗಳ ಮಾಹಿತಿ, ಸೇವೆ, ಕುಂದು ಕೊರತೆಗಳ ಪರಿಹಾರಕ್ಕೆ ಪಂಚಮಿತ್ರ ಪೋರ್ಟಲ್

ಚಾಮರಾಜನಗರ:ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ನೊಂದಾಯಿಸಲು ಹಾಗೂ ಪರಿಹರಿಸುವ ಸಲುವಾಗಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಮಿತ್ರ ವಾಟ್ಸ್ ಆಪ್ ಚಾಟ್ ಅನ್ನು ಅಭಿವೃದ್ದಿ ಪಡಿಸಿದೆ.

ಪಂಚಮಿತ್ರ ವಾಟ್ಸ್ ಆಪ್ ನಲ್ಲಿ ವಿವಿಧ ಮಾಹಿತಿಗಾಗಿ, ಆನ್ ಲೈನ್ ಸೇವಾ ಅರ್ಜಿಗಳನ್ನು ಸುಗಮಗೊಳಿಸಲು, ಅಪ್ಲಿಕೇಷನ್ ಸ್ಥಿತಿ ಟ್ರ್ಯಾಕಿಂಗ್ ಒದಗಿಸಲು ಮತ್ತು ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಕುಂದು ಕೊರತೆಗಳ ನೊಂದಣಿಯನ್ನು ಸಕ್ರಿಯಗೊಳಿಸಲು ಪಂಚಮಿತ್ರ ಅಭಿವೃದ್ದಿಪಡಿಸಿ ಕಾರ್ಯಗತಗೊಳಿಸಲಾಗಿದೆ.

ಗ್ರಾಮ ಪಂಚಾಯಿತಿಗಳ ಮಾಹಿತಿ, ಸೇವೆಗಳು ಹಾಗೂ ಕುಂದು ಕೊರತೆಗಳ ಪರಿಹಾರ ಕುರಿತ ಪಂಚಮಿತ್ರ ಪೊರ್ಟಲ್ಅನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ ಬಿಡುಗಡೆ ಮಾಡಿದರು.

ಸಾರ್ವಜನಿಕರು ತಮಗೆ ಅವಶ್ಯವಿರುವ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ಮತ್ತು ಗ್ರಾಮ ಪಂಚಾಯತಿಗಳ ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಲವಾರು ವೆಬ್‍ಸೈಟ್ ಮತ್ತು ಪೊರ್ಟಲ್‍ಗಳಲ್ಲಿ ಭೇಟಿ ನೀಡಬೇಕಾಗಿತ್ತು. ಅಲ್ಲದೇ, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ಕುಂದು ಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್‍ಸೈಟ್ ಅಥವಾ ಪೊರ್ಟಲ್ಗಳು ಇರಲಿಲ್ಲ.

ಆದುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ದಾಖಲಿಸಲು, ದೇಶದಲ್ಲೇ ಪ್ರಪ್ರಥಮ ಬಾರಿಗೆ ವಾಟ್ಸ್ ಆಪ್ ಚಾಟ್ ಅನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅಭಿವೃದ್ದಿಪಡಿಸಿ, ಅನುಷ್ಟಾನಗೊಳಿಸಿದೆ.

ಪಂಚಮಿತ್ರ ವಾಟ್ಸ್ ಆಪ್ ಚಾಟ್ ನಂ 8277506000 ಆಗಿದೆ. ಇನ್ನೂ ಮುಂದೆ ಗ್ರಾಮ ಪಂಚಾಯತಿಗಳ ಮಾಹಿತಿ ಮತ್ತು ವಿವರಗಳನ್ನು, ಸೇವೆಗಳಿಗೆ ಅರ್ಜಿ ಮತ್ತು ಕುಂದು ಕೊರತೆಗಳನ್ನು ವಾಟ್ಸ್ ಆಪ್ ಮೂಲಕ ದಾಖಲಿಸಬಹುದಾಗಿದೆ.

ವಾಟ್ಸ್ ಆಪ್ ಮೂಲಕ ಗ್ರಾಮ ಪಂಚಾಯತಿಗಳ ಮಾಹಿತಿ ಮತ್ತು ವಿವರಗಳನ್ನು ಪಡೆಯಬಹುದಾಗಿದೆ. ಚುನಾಯಿತ ಪ್ರತಿನಿಧಿಗಳ ವಿವರಗಳು, ಸಿಬ್ಬಂದಿಗಳ ವಿವರಗಳು, ಪೂರ್ಣಗೊಂಡ ಗ್ರಾಮ ಪಂಚಾಯತಿ ಸಭೆಗಳ ನಡಾವಳಿಗಳು, ಗ್ರಾಮ ಪಂಚಾಯತಿಗಳ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರಗಳು, ಸೇವೆಗಳ ವಿವರಗಳು, ಸ್ವಸಹಾಯ ಗುಂಪಿನ ವಿವರಗಳು, 4 (1) (ಚಿ) ಮತ್ತು 4 (1) (b) ಆರ್.ಟಿ.ಐ ದಾಖಲೆಗಳು ವಿವರಗಳನ್ನು ಪಡೆಯಬಹುದಾಗಿದೆ.

ವಾಟ್ಸ್ ಆಪ್ ಮೂಲಕ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಸೇವೆಗಳನ್ನು ಪಡೆಯಬಹುದಾಗಿದೆ. ಅರ್ಜಿಗಳ ಸ್ಥಿತಿಗತಿಯನ್ನು ಸಹ ಪರಿಶೀಲಿಸಬಹುದಾಗಿದೆ.

ವಾಟ್ಸ್ ಆಪ್ ಮೂಲಕ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿತ ಕುಂದು ಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಬಹುದಾಗಿದೆ ಹಾಗೂ ಕುಂದು ಕೊರತೆಯ ಸ್ಥಿತಿಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬಹುದಾಗಿದೆ.

ವರದಿ ಆರ್ ಉಮೇಶ್ ಮಲಾರಪಾಳ್ಯ