ನಗರ ಸಭೆಯಲ್ಲಿ ಮಾರ್ದನಿಸಿದ ನಮ್ಮ ತೆರಿಗೆ ನಮ್ಮ ಹಕ್ಕು
ದೊಡ್ಡಬಳ್ಳಾಪುರ: ನಗರದಲ್ಲಿ ಮರೀಚಿಕೆಯಾದ ಸ್ವಚ್ಛತೆ, ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ರದ್ಧತಿ, ಪೌರ ಕಾರ್ಮಿಕರಿಗೆ ವಿತರಿಸಲಾದ ಕುಕ್ಕರ್, ನಗರದ ಮೂಲಭೂತ ಸೌಕರ್ಯಗಳ ನಿರ್ಲಕ್ಷ್ಯ, ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಪಾದನೆ ಕುರಿತಂತೆ ಗುರುವಾರ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೂಗಾಟ, ಆರ್ಭಟ, ಗಳ ಬಿಸಿ ಚರ್ಚೆಗೆ ಸದಸ್ಯರ ವಾದವಿವಾದ, ಅಚ್ಚರಿ ಎಂದರೆ ಯಾವುದೇ ವಿಷಯಗಳು ತಾರ್ಕಿಕ ಅಂತ್ಯ ಕಾಣದೆ ಬರಿ ಚರ್ಚೆಗಳಲ್ಲಿ ಮುಗಿದಿದ್ದು ವಿಶೇಷ.
ನಗರಸಭೆ ಅಧ್ಯಕ್ಷೆ ಸುಧಾ ಲಕ್ಷ್ಮೀನಾರಾಯಣ ರವರ ಅದ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಆರಂಭಕ್ಕೆ ಹಿರಿಯ ಸದಸ್ಯರಾದ ಪ್ರಭುದೇವ್ ಹಾಗೂ ಎಂ. ಜಿ. ಶ್ರೀನಿವಾಸ್ ಸ್ವಚ್ಛತೆಯ ನಿರ್ಲಕ್ಷ್ಯ, ದಾಖಲೆಗಳಿಲ್ಲದ ಈ. ಖಾತೆಗಳು ಮುಂತಾದ ವಿಚಾರಗಳ ಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಸದಸ್ಯ ಶಿವಶಂಕರ್, ಕೋಟೇಷನ್ ಪಡೆಯದೇ ಟೆಂಡರ್ ಸಹ ಕರೆಯದೆ ಪೌರ ಕಾರ್ಮಿಕರಿಗೆ 6ಲಕ್ಷ ವೆಚ್ಚ ದಲ್ಲಿ ಕುಕ್ಕರ್ ಖರೀದಿಸಲಾಗಿದೆ. ಇದೆ ನಿಯಮವನ್ನು ಇತರೆ ಖರೀದಿಗಳು ಹಾಗೂ ಕಾಮಗಾರಿಗಳಿಗೂ ಅನ್ವಯವಾಗಬೇಕು. ಎಲ್ಲವನ್ನು ಅಧ್ಯಕ್ಷರ ಅಪ್ಪಣೆ ಮೇರೆಗೆ ಖರೀದಿ ನಡೆಯುವುದಾದರೆ ಸದಸ್ಯರ ಅನುಮತಿ ಏಕೆ ಬೇಕು. ಸಭೆಗಳು ಏಕೆ ನಡೆಯಬೇಕೆಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಎಂ ಜಿ., ಪ್ರಭಾ, ಇಂದ್ರಾಣಿ ಆನಂದ್ ಬಂತಿ ವೆಂಕಟೇಶ್ ಮಾತನಾಡಿ ಹೆಚ್ಚು ಮೊತ್ತದ ಯಾವುದೇ ವಸ್ತುಗಳ ಖರೀದಿಗೆ ಕೇವಲ ಕೋಟೇಷನ್ ಪಡೆದು ಖರೀದಿ ಮಾಡುವ ನಿಯಮ ನಗರಸಭೆಯ ನಿಯಮಗಳಿಗೆ ವಿರುದ್ಧವಾಗಿದೆ. ಇವು ಮತ್ತೆ ಮತ್ತೆ ಮರುಕಳಿಸಬಾರದು. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪೌರಯುಕ್ತರನ್ನು ಅಗ್ರಹಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ಮಾತನಾಡಿ ಸದಸ್ಯರ ಗಮನಕ್ಕೆ ತಾರದೆ ಕುಕ್ಕರ್ ಕುಕ್ಕರ್ ಖರೀದಿ ಮಾಡಿರುವುದು ಸದಸ್ಯರನ್ನು ಕಡೆ ಗಣಿಸಿ ದಂತಾಗಿದೆ ಎಂದರು. ರೈಲ್ವೆ ಸ್ಟ್ರೈಷನ್ ಮಲ್ಲೇಶ್ ಮಾತನಾಡಿ ಕೆಲವೊಂದು ಪ್ರಸ್ತಾವನೆ ಕೈಬಿಟ್ಟ ಬಗ್ಗೆ ಹಾಗೂ ಕಸದ ವಿಲೇವಾರಿಯ ಬಗ್ಗೆ ಪ್ರಸ್ತಾಪಿಸಿ ವಾರ್ಡಗಳ ತುಂಬೆಲ್ಲ ಕಸದ ರಾಶಿ ತುಂಬಿದ್ದು ಮೂಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಆದರೆ ವಾರ್ಡಗಳಲ್ಲಿ ಏನೆಂದು ಉತ್ತರಿಸುವುದು ಎಂದರು ಇದನ್ನು ಬೆಂಬಲಿಸಿದ ಮಹಿಳಾ ಸದಸ್ಯರಾದ ನಾಗವೇಣಿ, ಸುಮಿತ್ರಾ, ಇಂದ್ರಾಣಿ, ಹಂಸವೇಣಿ, ಪ್ರಭಾ ರವರು ನಾವು ವಾರ್ಡಗಳಲ್ಲಿ ಓಡಾಡುವಂತಿಲ್ಲ. ಜನ ನಮ್ಮನ್ನು ಹಿಗ್ಗಾ ಮುಗ್ಗಾ ಪ್ರಶ್ನಿಸುತ್ತಾರೆ ಹೀಗೆ ಆದರೆ ಹೇಗೆಂದು ಅಧಿಕಾರಿಗಳ ಮೇಲೆ ಹರಿ ಹಾಯ್ದರು. ಇದೇ ವೇಳೆ ಅಧ್ಯಕ್ಷರು, ಪೌರಯುಕ್ತರು ಉತ್ತರಿಸುವಂತೆ ಪಟ್ಟು ಹಿಡಿದರು. ಆಗ ಪೌರಯುಕ್ತ ಪರಮೇಶ್ ಸರಿಪಡಿಸುವ ಭರವಸೆ ನೀಡಿದರು. ಇದಕ್ಕೆ ತೃಪ್ತರಾಗದ ಇಂದ್ರಾಣಿ, ಪ್ರಭಾ, ನಾಗವೇಣಿ, ಸುಮಿತ್ರಾ ರವರು ವಾರ್ಡಗಳಿಗೆ ಪೌರ ಕಾರ್ಮಿಕರನ್ನು ಹೆಚ್ಚಿಸಿ ಇಲ್ಲದಿದ್ದರೆ ನಾವೇ ಕೆಲಸಗಾರರನ್ನು ಇಟ್ಟು ಕೆಲಸ ಮಾಡಿಸಿಕೊಳ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಹಾಗೂ ಬಡವರ ಅರೋಗ್ಯಕ್ಕೂ ಕನಿಷ್ಠ ಮೊತ್ತದ ಹಣವನ್ನು ನೀಡಲಾಗುತ್ತಿತ್ತು. ಈಗ ಅದು ನಿಂತು ಹೋಗಿದೆ. ಇದು ನಮ್ಮ ತೆರಿಗೆ ದುಡ್ಡು. ನಮ್ಮ ಹಣವನ್ನು ನಾವು ಖರ್ಚು ಮಾಡಲಿಲ್ಲವೆಂದರೆ ಹೇಗೆ, ತೆರಿಗೆ ಏಕೆ ಕಟ್ಟಬೇಕು. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಎಂ. ಜಿ. ಶ್ರೀನಿವಾಸ್, ಪ್ರಭುದೇವ್ ಪೌರಯುಕ್ತರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪೌರಯುಕ್ತರು ಸದಸ್ಯರ ಸಲಹೆಯನ್ನು ಸ್ವೀಕರಿಸಿ ಹಣ ಮೀಸಲಿಡುವ ಭರವಸೆ ನೀಡಿದರು. ಮಲ್ಲೇಶ್ ಮದ್ಯೆ ಪ್ರವೇಶಿಸಿ ಎಲ್ಲದಕ್ಕೂ ಬರೀ ಹಾರಿಕೆ ಉತ್ತರ ನೀಡ್ತೀರಿ. ಯಾವ್ದು ಪೂರಕವಾಗಿಲ್ಲ. ಕಳೆದ ಸಭೆಯಲ್ಲಿ ಹಲವು ಸದಸ್ಯರು ಸ್ವಚ್ಛತೆ ಬಗ್ಗೆ ಪ್ರಶ್ನಿಸಿದ್ದರು. ಆಗಲೂ ಇದೇ ಉತ್ತರ, ಈಗಲೂ ಇದೇ ಉತ್ತರ. ನಮ್ಮ ವಾರ್ಡಗಳಲ್ಲಿ ಕಸ ಎತ್ತಲು ಕಾರ್ಮಿಕರಿಲ್ಲ. ಆದರೆ ಬಾರುಗಳು ದೊಡ್ಡ ಅಂಗಡಿಗಳು, ಖಾಸಗಿ ಆಸ್ಪತ್ರೆಗಳು ಕಲ್ಯಾಣ ಮಂದಿರಗಳು ಮಾತ್ರ ಕಾಲ ಕಾಲಕ್ಕೆ ಸ್ವಚ್ಛತೆ ಕಾಣುತ್ತವೆ ಎಂದರೆ ಹೇಗೆ. ಇದರಿಂದ ಬರುತ್ತಿರುವ ದುಡ್ಡು ಎಲ್ಲಿ ಹೋಗುತ್ತಿದೆ. ಯಾರ ಜೋಬಿಗೆ ಹೋಗುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಎಂ. ಜಿ. ಶ್ರೀನಿವಾಸ್ ಕಸದ ಗಾಡಿ ನಮ್ಮದು. ಅದಕ್ಕೆ ಡೀಸೆಲ್ ನಮ್ಮದು ಕಾರ್ಮಿಕರು ನಮ್ಮವರು ಅವುಗಳಿಂದ ಬಂದ ಹಣಕ್ಕೆ ಲೆಕ್ಕವಿದ್ಯಾ ಎಂದರು. ಇದೇ ವೇಳೆ ಮಹಿಳಾ ಸದಸ್ಯರು ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಸರಿಯಾಗಿ ಉತ್ತರಿಸಬೇಕು ಎಂದು ಪಟ್ಟು ಹಿಡದರು.
ಕಂದಾಯ ವಸೂಲಾತಿ ಸರಿಯಾಗಿ ಆಗುತ್ತಿಲ್ಲ. ಖಾತೆ ದಾರರು ಕಟ್ಟುವ ತೆರಿಗೆ ಅಂಕಿಶಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದೆ ಕಂದಾಯ ವಿಭಾಗದ ಅಧಿಕಾರಿಗಳು ಏನೂ ಮಾಡುತ್ತಿದ್ದಾರೆ. ಇದರಿಂದ ನಗರ ಸಭೆಗೆ ಕೋಟ್ಯಂತರ ರುಪಾಯ್ ನಷ್ಟವಾಗುತ್ತಿದೆ ಎಂದರು. ಆಗ ಶಂಕ್ರಿ, ಪದ್ಮನಾಭ, ಆನಂದ್, ಭಾಸ್ಕರ್, ಪ್ರಭುದೇವ್, ಮಲ್ಲೇಶ್ ಮಾತನಾಡಿ ಸೂಕ್ತ ಅಂಕಿ ಅಂಶಗಳು ಗಣಕಿಕೃತವಾಗಬೇಕು. ನಮ್ಮಲ್ಲಿ ಸೂಕ್ತ ದಾಖಲಾತಿಗಳೇ ಇಲ್ಲವೆಂದ ಮೇಲೆ ಅದಕ್ಕೆ ಅರ್ಥವಿದೆಯೇ ಎಂದು ಅಧಿಕಾರಿಗಳನ್ನು ಚೇಡಿಸಿದರು.
ಎಲ್ಲದಕ್ಕೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಎಂದರೆ ಹೇಗೆ, ನಾವಿರುವುದು ಏಕೆ. ಸದಸ್ಯರಿಗೆ ಒಂದು ವಾರಗಳ ಕಾಲ ನೀಡಲಾದ ತರಬೇತಿಯಲ್ಲಿ ಅಧ್ಯಕ್ಷರು ಸಹ ಭಾಗವಹಿಸಿ ದ್ದರು. ಅಧ್ಯಕ್ಷರ ಅಪ್ಪಣೆ ಮೇರೆಗೆ ತುರ್ತು ಕಾಮಗಾರಿಗಳಿಗೆ ಮಾತ್ರ 4ರಿಂದ 6ಕೆಲಸಗಳಿಗೆ ಒಪ್ಪಿಗೆ ನೀಡಬಹುದು. ಉಳಿದ ಎಲ್ಲಾ ವಿಷಯಗಳು ಸಾಮಾನ್ಯ ಸಭೆಯಲ್ಲಿ ಚರ್ಚೆಯ ನಂತರವೇ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಎಂದು ಸಭೆಯ ಗಮನಕ್ಕೆ ತಂದ ಪ್ರಭಾರವರು ಆದರೆ ನಿಯಮ ಮೀರಿ 17ವಿಷಯಗಳು ಅಧ್ಯಕ್ಷರ ಅಪ್ಪಣೆ ಮೇರೆಗೆ ನಡೆಸಲಾಗಿದೆ. ಇದಕ್ಕೆ ಏನೂ ಹೇಳಬೇಕು ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷೆ ಸುಧಾರವರು ಎಲ್ಲವನ್ನು ತಿಳಿಸಲಾಗಿದೆ. ಫೋನ್ ಮಾಡಿಯೇ ತಿಳುಸಬೇಕಾ ಎಂದಾಗ ಸದಸ್ಯರಿಂದ ಸ್ವಲ್ಪ ಮಟ್ಟಿನ ವಿರೋಧ ವ್ಯಕ್ತವಾಯಿತು.
ತ. ನ. ಪ್ರಭುದೇವ್, ಎಂ ಜಿ. ಶ್ರೀನಿವಾಸ್, ಮಲ್ಲೇಶ್, ಶಂಕ್ರಿ, ಶಿವು, ಬಂತಿ ವೆಂಕಟೇಶ್, ಪದ್ಮನಾಭ, ಭಾಸ್ಕರ್, ಅಲ್ತಾಫ್, ಆನಂದ್, ಚಿಕ್ಕಪ್ಪಿ, ಇಂದ್ರಾಣಿ, ವತ್ಸಲಾ, ನಾಗವೇಣಿ ಹಂಸ ದೇವರಾಜ್, ಪ್ರಭಾ ನಾಗರಾಜ್, ನಾಗರತ್ನ, ಸುಮಿತ್ರಾ ಆನಂದ್, ರಜನಿ ಸುಬ್ರಮಣಿ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿ ಸಭೆಗಳಂತೆ ಈ ಸಭೆಯು ಯಾವುದೇ ಉಪಯೋಗವಾಗದೆ ಸದಸ್ಯರ ಗದ್ದಲಗಳಿಗೆ ಸಾಕ್ಷಿಯಾಗಿ ನೀರಸದಲ್ಲಿ ಸಭೆ ಮುಕ್ತಾಯವಾಯಿತು.