ಕೆಟ್ಟು ಹೋದ ವಿದ್ಯುತ್ ಪರಿವರ್ತಕ ತಿಂಗಳಾದರೂ ಸರಿಪಡಿಸದ ದೊಡ್ಡಬಳ್ಳಾಪುರ ಬೆಸ್ಕಾಂ ಅಧಿಕಾರಿಗಳು

ದೊಡ್ಡಬಳ್ಳಾಪುರ: ತಾಲೂಕಿನ ಗಡಿ ಭಾಗದ ಹಿಂದುಳಿದ ಪ್ರದೇಶವಾದ ಸಾಸಲು ಹೋಬಳಿ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗಕ್ಕೆ ಮಲತಾಯಿ ಮಗುವಿನಂತಾಗಿದೆ.
ತಾಲೂಕಿನ ಇತರೆ ಹೋಬಳಿಗಳಿಗೆ ಸಿಗುತ್ತಿರುವ ಪ್ರಾತಿನಿಧ್ಯದಲ್ಲಿ ಸಾಸಿವೆಯಷ್ಟು ಕಾಳಜಿ ಸಾಸಲು ಹೋಬಳಿ ಮೇಲೆ‌ ಕಾಣದಾಗಿದೆ. ಹೋಬಳಿಯಲ್ಲಿ ದಶಕಗಳಿಂದ ಶಿಕ್ಷಣ, ಆರೋಗ್ಯ,ಬಡತನದ ಸಮಸ್ಯೆ ಹಾಸು ಹೊಕ್ಕಾಗಿದೆ.ಆದರೆ, ಜನಪ್ರತಿನಿಧಿಗಳಿಗೆ ಸಾಸಲು ಹೋಬಳಿಯ ಸಮಸ್ಯೆ, ಚುನಾವಣೆ ಗಳಲ್ಲಿ ಪ್ರಚಾರ ಮಾಡಿ ಮತದಾರರಿಂದ ಮತ ಮಡೆಯುವ ಸರಕಾಗಿ ಮಾತ್ರ ಬಳಕೆ ಯಾಗುತ್ತಿದೆ.

ಸರ್ಕಾರಿ ಸೇವೆಗಳಲ್ಲಿ ತೊಡಗಿಸಿಕೊಂಡ ಅತಿ ಹೆಚ್ಚಿನವರು ಸಾಸಲು ಹೋಬಳಿಯಿಂದ ಹೊರಗಡೆ ಹೋದವರೇ ಆಗಿದ್ದಾರೆ.ಆದರೂ ಅಭಿವೃದ್ಧಿ ಕಾಣದಿರುವುದು ಯಕ್ಷಪ್ರಶ್ನೆಯಾಗಿದೆ.

ಹೋಬಳಿಯ ಶ್ರೀರಾಮನಹಳ್ಳಿ ಗ್ರಾಮದಲ್ಲಿ ರೈತರು ಅಡಿಕೆ, ಬಾಳೆ, ತೆಂಗು ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಲುವಾಗಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ವಿಪರ್ಯಾಸವೆಂದರೆ 18 ಕೊಳವೆ ಬಾವಿಗಳಿಗೆ ಇರುವುದು ಒಂದೇ ವಿದ್ಯುತ್ ಪರಿವರ್ತಕ. ಅತಿಯಾದ ಒತ್ತಡದಿಂದ ವಿದ್ಯುತ್ ಪರಿವರ್ತಕ(ಟ್ರಾನ್ಸ್ ಫಾರ್ಮರ್) ಪದೇ ಪದೇ ಸುಟ್ಟು ಹೋಗುತ್ತಿದೆ. ಒಮ್ಮೆ ವಿದ್ಯುತ್ ಪರಿವರ್ತಕ ರಿಪೇರಿ ಮಾಡಿಸಿದರೆ‌ ಎರಡು ದಿನ ಮಾತ್ರ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ನಂತರ ಸಮಸ್ಯೆ ಪುನರಾವರ್ತನೆಯಾಗುತ್ತದೆ.

ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸು ವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಸಬೂಬು ಹೇಳಿಕೊಂಡು ದಿನದೂಡುತ್ತಿದ್ದಾರೆ. ಇನ್ನು ಶ್ರೀರಾಮನಹಳ್ಳಿಯಲ್ಲಿರುವ ಒಂದೇ ಒಂದು ವಿದ್ಯುತ್ ಪರಿವರ್ತಕಕ್ಕೆ ಮನೆಯಲ್ಲಿ ಕೊಳವೆ ಬಾವಿ ಹೊಂದಿದವರೂ ಕೂಡ ಸಂಪರ್ಕ ಪಡೆಯುತ್ತಿದ್ದು, ಮತ್ತಷ್ಟು ಒತ್ತಡದಿಂದ ಜಂಪ್ ಸುಟ್ಟುಹೋಗುವುದು ಸಾಮಾನ್ಯವಾಗಿದೆ.

ಗ್ರಾಮಸ್ಥರ ಮಧ್ಯೆ ಸದಾ ಜಗಳ:

ವಿದ್ಯುತ್ ಪರಿವರ್ತಕಕ್ಕೆ‌ ಸಂಪರ್ಕ ಪಡೆಯುವ ವಿಚಾರವಾಗಿ ಗ್ರಾಮಸ್ಥರ ಮಧ್ಯೆ ಸಾಕಷ್ಟು ಬಾರಿ ಜಗಳವಾಗಿದೆ. ಗ್ರಾಮಸ್ಥರ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ‌ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಗ್ರಾಮದ ಹಲವು ರೈತರು 4-5 ವರ್ಷಗಳ ಹಿಂದೆಯೇ ವೈಯಕ್ತಿಕ ವಿದ್ಯುತ್ ಪರಿವರ್ತಕ ಕ್ಕಾಗಿ ಅರ್ಜಿ ಸಲ್ಲಿಸಿ, ಠೇವಣಿ ಸಹ ಕಟ್ಟಿದ್ದಾರೆ. ರೈತ ಸಾಲಗಾರನಾಗಿ ನಷ್ಟ‌ ಅನುಭವಿಸುತ್ತಿದ್ದರೂ ಬೆಸ್ಕಾಂನಿಂದ ಮಾತ್ರ ವಿದ್ಯುತ್ ಪರಿವರ್ತಕ‌ ಬಂದಿಲ್ಲ. ಗ್ರಾಮದ ಅಶ್ವತ್ಥಪ್ಪ ಎಂಬುವರ ಬಳಿ ಲೈನ್ ಮೆನ್ ಒಬ್ಬರು ಟಿಸಿ ಹಾಗೂ ಕಂಬಕ್ಕಾಗಿ 50 ಸಾವಿರ ಪಡೆದು ಎರಡು ವರ್ಷವಾಗಿದೆ. ಈವರೆಗೂ ಟಿಸಿನೂ ಇಲ್ಲ, ಹಣನೂ ಇಲ್ಲ ಎಂದು 85 ವರ್ಷದ ವೃದ್ಧ ಅಶ್ವತ್ಥಪ್ಪ‌ ಕಣ್ಣೀರು ಹಾಕಿದರು.

ಟಿ‌.ಸಿ ಗಾಗಿ ಠೇವಣಿ‌ ಇರಿಸಿದ ಹಲವು ರೈತರ ಪಾಡು ಇದಕ್ಕಿಂತ ಭಿನ್ನವಾಗಿಲ್ಲ. ರೈತರ ಸಮಸ್ಯೆ ಕುರಿತು ಬೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬಜೆಟ್ ಬಂದಿಲ್ಲ. ಮಾರ್ಚ್ ತಿಂಗಳಲ್ಲಿ 63 ಕೆವಿ ಸಾಮರ್ಥ್ಯದ ಇನ್ನೊಂದು ವಿದ್ಯುತ್ ಪರಿವರ್ತಕ ಅಳವಡಿಸುತ್ತೇವೆ. ಸಾಸಲು ಹಾಗೂ ತೂಬಗೆರೆ ಹೋಬಳಿಯ 250 ವೈಯಕ್ತಿಕ ಫಲಾನುಭವಿ ಗಳಿಗೆ ಟಿಸಿ ಅಳವಡಿಸಲು ಕಾರ್ಯಾದೇಶ ನೀಡಲಾಗಿದೆ. ಶೀಘ್ರವೇ ವಿದ್ಯುತ್ ಪರಿವರ್ತಕ ಅಳವಡಿಸಲಾಗುವುದು ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಎಇಇ ಇನಾಯತ್ ಅವರು ತಿಳಿಸಿದರು.

ಇನ್ನು ಇದೇ ಸಮಸ್ಯೆ ಕುರಿತು ನೆಲಮಂಗಲದ ಬೆಸ್ಕಾಂ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಪ್ರಶ್ನಿಸಿದರೆ, ಏನೇ ಹೇಳಬೇಕಾದರೂ ದೊಡ್ಡಬಳ್ಳಾಪುರ ಉಪವಿಭಾಗದ ಅಧಿಕಾರಿಗಳಿಗೆ ತಿಳಿಸಿ, ಅವರು ನಮ್ಮ ಗಮನಕ್ಕೆ ತರುತ್ತಾರೆ. ಆ ಬಳಿಕ ಸಮಸ್ಯೆ ಪರಿಶೀಲಿಸೋಣ ಎಂದು ಉಡಾಫೆ ಉತ್ತರ‌ ನೀಡುತ್ತಾರೆ. ಇದೇ ಕಾರ್ಯನಿರ್ವಾಹಕ‌ ಎಂಜಿನಿಯರ್ ಅವರಿಗೆ ಶಾಸಕರಾದಿಯಾಗಿ ಗ್ರಾ.ಪಂ. ಅಧ್ಯಕ್ಷರು ಸಾಕಷ್ಟು ಬಾರಿ ದೂರವಾಣಿ ಮೂಲಕ‌ ತಿಳಿಸಿದ್ದರೂ ಸಮಸ್ಯೆಯ ಗಂಭೀರತೆಯ ಅರಿವು ಅಧಿಕಾರಿಗಾಗಿಲ್ಲ.

30 ಎಕರೆಗೂ ಹೆಚ್ಚು ಬೆಳೆ ನಾಶ:
ಶ್ರೀರಾಮನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕದ ಸಮಸ್ಯೆಯಿಂದ ಸುಮಾರು 30 ಎಕರೆಗು ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ವಿದ್ಯುತ್ ಪರಿವರ್ತಕದ ಸಮೀಪವೇ ಬೆಳೆದಿರುವ ಅಡಿಕೆ ಸಸಿಗಳು ನೀರಿಲ್ಲದೇ ಒಣಗುತ್ತಿವೆ. ರಾಗಿ ಪೈರು, ಬಾಳೆ ಗಿಡಗಳು ಕೂಡ ಒಣಗಲಾರಂಭಿಸಿವೆ. ಕಳೆದ ವರ್ಷ ಸರಿಯಾದ ಮಳೆಯಾಗದೇ ಬೆಳೆ ನಾಶವಾಯಿತು. ಈವರ್ಷ ಬಿಸಿಲು ಹೆಚ್ಚಿದೆ. ವಿದ್ಯುತ್ ಅಭಾವ, ವಿದ್ಯುತ್ ಪರಿವರ್ತಕದ ಸಮಸ್ಯೆಯಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಜೀವನಾಧಾರವಾದ ಕೃಷಿ ಕೈಕೊಟ್ಟರೆ ನಮ್ಮ ಬದುಕು ಹೇಗೆ ಎಂದು ಗ್ರಾಮಸ್ಥರಾದ ನರಸಿಂಹಮೂರ್ತಿ, ಮಂಜುನಾಥ್ ಹಾಗೂ ರೈತ‌ ಮಹಿಳೆ ಸಂಧ್ಯಾ ಅವರು ಪ್ರಶ್ನಿಸಿದರು.

ತಕ್ಷಣವೇ ಬೆಸ್ಕಾಂ ಅಧಿಕಾರಿಗಳು ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದರು.

ಜನರೇಟರ್ ತರಿಸಿ ನೀರು ಹಾಯಿಸುವ ಸಾಹಸ:
ವಿದ್ಯುತ್ ಪರಿವರ್ತಕ‌ ಒಮ್ಮೆ ಸುಟ್ಟು ಹೋದರೆ ಬೆಸ್ಕಾಂ ಸಿಬ್ಬಂದಿ ಅದನ್ನು ದುರಸ್ತಿಗೊಳಿಸಲು ಕನಿಷ್ಠ 20 ದಿನ ಸಮಯ ತೆಗೆದುಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಹೆಜ್ಜಾಜಿ ಸೇರಿ ಹಲವೆಡೆ ಜನರೇಟರ್ ತರಿಸಿ ನೀರು ಹಾಯಿಸುತ್ತೇವೆ. ಒಮ್ಮೆ ಜನರೇಟರ್ ಬಾಡಿಗೆಗೆ ತಂದರೆ ಅವರಿಗೆ ಸಾವಿರಾರು ರೂಪಾಯಿ ತೆರಬೇಕಾಗುತ್ತದೆ. ಕಿ.ಮೀ.ಗಟ್ಟಲೇ ತೋಟಗಳಿಗೆ ವೈರ್ ತರಬೇಕಾಗಿದೆ ಹಾಗಾಗಿ ವೈರ್ ಸುಟ್ಟು ಹೋಗುವುದರಿಂದ ಗಾಯದ ಮೇಲೆ‌ ಬರೆ ಬಿದ್ದಂತಾಗುತ್ತದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.