ಅನನ್ಯ ವ್ಯಕ್ತಿತ್ವದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ.
ದೊಡ್ಡಬಳ್ಳಾಪುರ: ಶಿಕ್ಷಣ, ಹರಿಜನೋದ್ಧಾರ, ಆರೋಗ್ಯ, ಪರಿಸರ ಪ್ರೇಮಿಯ ಚಿರಸ್ಮರಣೆ(ಫೆ.22) 164ನೇ ಜನ್ಮದಿನದ ಸಂಭ್ರಮ.
ದೊಡ್ಡಬಳ್ಳಾಪುರದ ಪುರಪಿತೃ ಎಂದೇ ಕರೆಯಲ್ಪಡುವ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಒಂದು ಸಮಾಜದ ಶಕ್ತಿಯಾಗಿ ಊರಿನ ಐಕಾನ್ ಆಗಿ ಗುರುತಿಸಿ ಕೊಂಡ ಮತ್ತು ನಿಸ್ವಾಥ೯ ಸೇವೆಯ ಮೂಲಕ ಜನ ಮಾನಸದಲ್ಲಿ ಉಳಿದಿರುವ ಧೀಮಂತ ವ್ಯಕ್ತಿತ್ವ. ಇಂತಹ ಪರಿಪೂಣ೯ ವ್ಯಕ್ತಿತ್ವ ಒಟ್ಟಾರೆ ದೊಡ್ಡಬಳ್ಳಾಪುರವನ್ನು ಪ್ರಭಾವಿಸಿರುವುದು ಮಾತ್ರವಲ್ಲದೆ ಸರ್.ಎಂ.ವಿಶ್ವೇಶ್ವರಯ್ಯ, ಕುವೆಂಪು, ಡಾ.ಎಚ್.ನರಸಿಂಹಯ್ಯ ಅಂತಹ ಧೀಮಂತರ ಸಂವೇದನೆಗಳನ್ನು ಪ್ರಭಾವಿಸುವ ಮಟ್ಟಕ್ಕೆ ಬೆಳೆದದ್ದು ಇತಿಹಾಸ. ಒಬ್ಬ ಸಾಮಾನ್ಯ ಸ್ಕೂಲ್ ಮೇಷ್ಟ್ರಾಗಿದ್ದ ಕೊಂಗಾಡಿಯಪ್ಪ ಬೆಳೆದ ರೀತಿ,ಇತರರನ್ನು ಪ್ರಭಾವಿಸಿದ ಪ್ರಖರತೆ ಮತ್ತು ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಒಂದು ಊರನ್ನು ಸಮರ್ಥವಾಗಿ ನಿರ್ಮಾಣ ಮಾಡಲು ಹಗಲಿರುಳು ಶ್ರಮಿಸಿದ ರೀತಿ ಅನನ್ಯ-ಅದ್ವಿತೀಯ.
ಯಾರು ಈ ಕೊಂಗಾಡಿಯಪ್ಪ?:
ಇವರು ಬರೀ ವ್ಯಕ್ತಿಯಲ್ಲ, ದೊಡ್ಡಶಕ್ತಿ. ಅಕ್ಷರ ಸಾರ್ವತ್ರೀಕರಣದಿಂದ ಮಾತ್ರ ಸಾಮಾಜಿಕ ಅಭಿವೖದ್ಧಿ ಸಾಧ್ಯ ಎಂದು ಅರಿತಿದ್ದವರು. ಗಾಂಧಿ ಹರಿಜನೋದ್ಧಾರ ಮಾತನ್ನಾಡುವ ಮುಂಚೆಯೇ ಅದನ್ನು ವಸ್ತುನಿಷ್ಠವಾಗಿ ಜಾರಿಗೆ ತಂದಿದ್ದ ವ್ಯಕ್ತಿ. ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸಿ, ಮಕ್ಕಳ ಶ್ರೇಯೋಭಿಲಾಷಿಯಾಗಿದ್ದವರು. ಸ್ವಚ್ಛತೆ, ಪರಿಸರ ಸಂರಕ್ಷಣೆಗೆ ಒತ್ತು ನೀಡಿ ಪರಿಸರ ಸ್ನೇಹಿ ಸಮಾಜ ನಿಮಾ೯ಣಕ್ಕೆ ಅಡಿಗಲ್ಲು ಹಾಕಿದವರು. ಸಾಂಪ್ರದಾಯಿಕ ಡಂಭಾಚಾರಗಳಿಗೆ ತಿಲಾಂಜಲಿ ನೀಡಿ ಆಧುನೀಕತೆಯ ಸವಲತ್ತುಗಳನ್ನು ಊರಿಗೆ ತರಬೇಕು ಎಂಬ ಉತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿ. ತಮಗೆ ಬರುತ್ತಿದ್ದ ಸಂಬಳವನ್ನು ಬಡ ವಿದ್ಯಾಥಿ೯ಗಳ ವಿದ್ಯಾಭ್ಯಾಸಕ್ಕೇ ಕೊಟ್ಟುಬಿಡುತ್ತಿದ್ದ ಮಾದರಿ ಬಡಮೇಷ್ಟ್ರು. ಅಷ್ಟೇ ಅಲ್ಲ, ತಮ್ಮ ನಿಸ್ವಾಥ೯ ಸೇವೆಗೆ ಪ್ರತಿಫಲ ಎಂಬಂತೆ ಮೈಸೂರು ಮಹಾರಾಜ ನಾಲ್ವಡಿ ಕೖಷ್ಣರಾಜ ಒಡೆಯರಿಂದ ‘ಲೋಕಸೇವಾನಿರತ’ ಬಿರುದು ಪಡೆದವರು.
ವಾರಾನ್ನದ ಮೇಷ್ಟ್ರು, ಕಾಕಣ್ಣನಾಗಿ ಅಂದಿನ ವಿದ್ಯಾಥಿ೯ಗಳಿಗೆ ಸದಾ ಕಾಲ ಪ್ರೇರಣೆ-ಒತ್ತಾಸೆ. 100 ವಷ೯ಗಳ ಹಿಂದೆಯೇ ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡಿದ ಶಿಕ್ಷಣ ತಜ್ಞ. ಹೀಗೆ ಕೊಂಗಾಡಿಯಪ್ಪನವರ ಅನನ್ಯತೆ ಬೆಳೆಯುತ್ತಾ ಹೋಗುತ್ತದೆ.
ಜೀವನ ಸಾಧನೆಯ ಹಿನ್ನೋಟ:
ಕೊಂಗಾಡಿಯಪ್ಪ ಹುಟ್ಟಿದ್ದು 1861 ಫೆ.22ರಂದು. ತಂದೆ ಕೊಂಗಾಡಿ ಶಿವಪ್ಪ, ತಾಯಿ ನರಸಮ್ಮ. 15ನೇ ವಷ೯ಕ್ಕೇ ಆಂಗ್ಲೋ ವರ್ನಾಕುಲರ್ ಶಾಲೆಯಲ್ಲಿ ಉಪಾಧ್ಯಾಯರಾಗಿ ಕಾರ್ಯ ಆರಂಭಿಸಿದ ಕೀತಿ೯.1889ರಲ್ಲಿ ಶಾಲಾ ಮುಖ್ಯಶಿಕ್ಷಕರಾಗಿ ಬಡ್ತಿ,1904ರಲ್ಲಿ ದಿ ದೊಡ್ಡಬಳ್ಳಾಪುರ ಇಂಡಸ್ಟ್ರೀಯಲ್ ಸ್ಕೂಲ್ ಸ್ಥಾಪನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. 1916ರಲ್ಲಿ ಎಕಾನಾಮಿಸ್ಟ್ ಆಕ್ಟಿವಿಸ್ಟ್ ಪದಕ ಪ್ರಾಪ್ತಿ. 1917ರಲ್ಲಿ 40 ವಷ೯ದ ಸೇವೆ ನಂತರ ವಿದ್ಯಾ ಇಲಾಖೆಯಿಂದ ನಿವೃತ್ತರಾದರು. ನಂತರ ಅವರು ಪುರಸಭೆಯ ಅಧ್ಯಕ್ಷರಾಗಿ, ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ನಂತರ ಬೆಂಚ್ ಕೋಟ್೯ಗೆ ಅಧಿಕಾರೇತರ ಅಧ್ಯಕ್ಷರಾಗಿ ನೇಮಕ.1931ರಲ್ಲಿ ನಾಲ್ವಡಿ ಕೖಷ್ಣರಾಜ ಒಡೆಯರ್ ರಿಂದ ಲೋಕಸೇವಾನಿರತ ಬಿರುದು ಪಡೆದರು. ಮಹಿಳಾ ಸಮಾಜ ಮತ್ತು ವೀವರ್ಸ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ, ದೇವಾಂಗ ಬ್ಯಾಂಕ್ ಸ್ಥಾಪನೆ, ಮುನಿಸಿಪಲ್ ಹೈಸ್ಕೂಲ್ ಕಟ್ಟಡದ ಶಂಕುಸ್ಥಾಪನೆ ಹೀಗೆ ಅವರ ಕೊಡುಗೆ ಮುಂದುವರೆಯುತ್ತದೆ…
ದೊಡ್ಡಬಳ್ಳಾಪುರದ ಐಕಾನ್ :
ದೊಡ್ಡಬಳ್ಳಾಪುರಕ್ಕೆ ರೈಲು ವ್ಯವಸ್ಥೆಯಾಗಲು ಕೊಂಗಾಡಿಯಪ್ಪ ಮುಖ್ಯ ಕಾರಣ. ಜೊತೆಗೆ ರಾಜ್ಯದಲ್ಲೇ ವಿದ್ಯುತ್ ವ್ಯವಸ್ಥೆ ಪಡೆದ 2ನೇ ತಾಲೂಕು ಎಂಬ ಹೆಗ್ಗಳಿಕೆಗೆ ದೊಡ್ಡಬಳ್ಳಾಪುರ ಕಾರಣವಾಗಲು ಕೊಂಗಾಡಿಯಪ್ಪನವರೇ ನೇರ ಕಾರಣ.1932ರಲ್ಲೇ ಅವರು ದೊಡ್ಡಬಳ್ಳಾಪುರ ಕ್ಕೆ ವಿದ್ಯುಚ್ಚಕ್ತಿ ಬರುವಂತೆ ಮೈಸೂರು ಮಹಾರಾಜರನ್ನು ಓಲೈಸಿ, ಇಲ್ಲಿ ವಿದ್ಯುತ್ ಮಗ್ಗಗಳು ನೆಲೆಯೂರಲು,ನೇಕಾರಿಕೆಯ ಆಧುನೀಕರಣಕ್ಕೆ ಕಾರಣರಾದವರು. ಮನೆಯಲ್ಲೇ ನೂರಾರು ವಿದ್ಯಾಥಿ೯ಗಳಿಗೆ ವಾರಾನ್ನ ಮಾಡಿಕೊಂಡು, ವಿದ್ಯಾಥಿ೯ಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು.
ಹೆಸರು ಚಿರಸ್ಥಾಯಿ:
ದೊಡ್ಡಬಳ್ಳಾಪುರದಲ್ಲಿ ಕೊಂಗಾಡಿಯಪ್ಪನವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅವರ ಹೆಸರಿನ ವಿದ್ಯಾ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾಥಿ೯ಗಳು ಕಲಿಯುತ್ತಿದ್ದಾರೆ. ನಗರಸಭೆ ಬಸ್ ನಿಲ್ದಾಣಕ್ಕೆ ಕೊಂಗಾಡಿಯಪ್ಪ ಅವರ ಹೆಸರಿಟ್ಟಿದೆ. ಊರಿನ ಮುಖ್ಯರಸ್ತೆಯೂ ಅವರ ಹೆಸರಿನಲ್ಲೇ ಇದೆ. ಮಾರುಕಟ್ಟೆ ಶಾಲೆಯ ಮುಂದೆ ಅವರ ಪುತ್ಥಳಿ ಇದೆ. ಇತ್ತೀಚೆಗೆ ಅವರ ಸಮಾಧಿ ಸ್ಥಳವನ್ನು ಪುಣ್ಯಸ್ಥಳವನ್ನಾಗಿ ಅಭಿವೖದ್ಧಿ ಪಡಿಸುವ ಪ್ರಯತ್ನಗಳು ಸಾಗಿವೆ. ನಗರಸಭೆಯ ನೇತೃತ್ವದಲ್ಲಿ ಜನ್ಮದಿನಾಚರಣೆ ಯನ್ನು ಈ ವರ್ಷದಿಂದ *ದೊಡ್ಡಬಳ್ಳಾಪುರದ ಹಬ್ಬ* ವಾಗಿ ಆಚರಿಸಲಾಗುತ್ತಿದೆ.
ಇಂತಹ ಅನನ್ಯ ವ್ಯಕ್ತಿತ್ವಕ್ಕೆ ಅನಂತ ನಮನ ಸಲ್ಲಿಸಬೇಕಾದ್ದು ನಮ್ಮ ಕರ್ತವ್ಯ..