ಮಾಂಬಳ್ಳಿ, ಅಗರ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥ : ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

ಯಳಂದೂರು: ತಾಲೂಕಿನ ಮಾಂಬಳ್ಳಿ ಗ್ರಾಮಕ್ಕೆ ಇಂದು ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.

ಗ್ರಾಮಕ್ಕೆ ಜಾಗೃತಿ ಜಾಥ ಬರುತ್ತಿದ್ದಂತೆಯೇ ಕಳಶಹೊತ್ತ ಮಹಿಳೆಯರು ಸ್ವಾಗತಿಸಿದರೆ, ಮಂಗಳವಾದ್ಯದ ಸದ್ದಿಗೆ ಯುವಕ, ಯುವತಿಯರು ಕೋಲಾಟವಾಡುತ್ತಾ, ಹಾಡುತ್ತಾ, ಕುಣಿಯುತ್ತ ಸಂಭ್ರಮಿಸಿದರು. ವಯೋವೃದ್ಧರೂ ಸಹ ಈ ಸಂಭ್ರಮದಲ್ಲಿ ಹಿಂದೆ ಬೀಳಲಿಲ್ಲ. ಅಲಂಕೃತ ಎತ್ತಿನಗಾಡಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನದ ಭಾವಚಿತ್ರಗಳನ್ನು ಇರಿಸಿ ಹೂವಿನಿಂದ ಅಲಂಕರಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡರು.

ಗ್ರಾಮದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಕುಣಿದು ಕುಪ್ಪಳಿಸಿದರು. ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಾಥದಲ್ಲಿ ಭಾಗವಹಿಸಿದ್ದರು. ಕೆಲವು ಯುವಕರು ತಮ್ಮ ಬೈಕ್‍ಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರುವ ನೀಲಿ ಧ್ವಜವನ್ನು ಹಾಕಿಕೊಂಡು ರ್ಯಾಲಿಯನ್ನು ನಡೆಸಿದರು. ದಣಿದಿದ್ದವರಿಗೆ ನೀರು, ಮಜ್ಜಿಗೆ, ಪಾನಕ ವಿತರಿಸಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಜಗತ್ತು ಕಂಡ ಶ್ರೇಷ್ಟ ಚಿಂತಕರು, ಶೋಷಿತ ಧ್ವನಿಗಳ ನಾಯಕರು, ವಿಶ್ವಕಂಡ ಅದ್ಭುತ ಅರ್ಥಶಾಸ್ತ್ರಜ್ಞ, ಸಾಮಾಜಿಕ ಹಿತಚಿಂತಕರಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವದಲ್ಲೇ ಅತ್ಯುತ್ತಮ ಸಂವಿಧಾನವನ್ನು ನಮ್ಮ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರನ್ನು ಪಡೆದ ನಾವು ಧನ್ಯರಾಗಿದ್ದೇವೆ ಎಂದರು.

ಸಂವಿಧಾನ ನಮ್ಮ ದೇಶದ ನಿಜವಾದ ಪವಿತ್ರ ಗ್ರಂಥವಾಗಬೇಕು, ಇದನ್ನು ಪೂಜಿಸುವ ಕೆಲಸ ಮಾಡಬೇಕು. ಇದರಲ್ಲಿರುವ ಮೌಲ್ಯಯುತವಾದ ವಿಧಿಗಳನ್ನು ಅರ್ಥಮಾಡಿಕೊಳ್ಳಬೇಕು, ಪ್ರತಿಯೊಬ್ಬರೂ ಇದರ ಒಳಾರ್ಥವನ್ನು. ತಿಳಿದುಕೊಳ್ಳುವಂತಾಗಬೇಕು. ಸಂವಿಧಾನ ಪೀಠಿಕೆ ಇಡೀ ಸಂವಿಧಾನದ ಹೃದಯವಾಗಿದೆ. ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಜನಸಾಮಾನ್ಯರಿಗೆ ಅರ್ಥೈಸುವ ಸಲುವಾಗಿ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಜಾಥವನ್ನು ಹಮ್ಮಿಕೊಂಡಿದೆ. ಎಂದು ತಿಳಿಸಿದರು.

ಮಾಂಬಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ವೇತಾ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಮಾಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲೇಶ್, ಉಪಾಧ್ಯಕ್ಷರಾದ ಮುಬಾರಕ್ ಉನ್ನೀಸಾ, ಸದಸ್ಯರಾದ ಲಕ್ಷ್ಮಿ, ಮುಜಾಹೀದ್‍ಉಲ್ಲಾ, ಇಂದ್ರಮ್ಮ, ರಾಜೇಶ್ವರಿ, ರತ್ನಮ್ಮ, ಶಿವಣ್ಣ, ಜ್ಯೋತಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಜೆ. ಯೋಗೇಶ್, ತಹಶೀಲ್ದಾರ್ ಜಯಪ್ರಕಾಶ್, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್, ಬಿಇಒ ಕೆ. ಕಾಂತರಾಜು, ಮಾಂಬಳ್ಳಿ ನಂಜುಂಡಸ್ವಾಮಿ, ಮಾಂಬಳ್ಳಿ ಶಿವಕುಮಾರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಉಷಾರಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಗರ ಗ್ರಾಮ ಪಂಚಾಯಿತಿಯಲ್ಲೂ ಜಾಗೃತಿ ಜಾಥಾವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುದ್ದನಾಯಕ, ಉಪಾಧ್ಯಕ್ಷರಾದ ನಿರ್ಮಲ ಶ್ರೀನಿವಾಸ್, ಇನ್ನಿತರ ಸದಸ್ಯರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಶ್ರೀನಿವಾಸ್ ಭಾಗವಹಿಸಿದ್ದರು.

ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಪುಸ್ತಕ ಜೋಳಿಗೆ ಮೂಲಕ ಅತ್ಯುತ್ತಮ ಪುಸ್ತಕಗಳನ್ನು ಸಂಗ್ರಹಿಸಲಾಯಿತು. ಸಣ್ಣ ಮಕ್ಕಳು ಡಾ. ಬಿ.ಆರ್. ಅಂಬೇಡ್ಕರ್, ಇನ್ನಿತರ ರಾಷ್ಟ್ರನಾಯಕರ ವೇಷಧಾರಿಗಳಾಗಿ ಗಮನ ಸೆಳೆದರು.

ವರದಿ ಆರ್ ಉಮೇಶ್ ಮಲಾರಪಾಳ್ಯ