ಬೃಹತ್ ಆರೋಗ್ಯ ಮೇಳಕ್ಕೆ ಅಭೂತಪೂರ್ವ ಸ್ಪಂದನೆ : 12,047 ಮಂದಿಗೆ ಆರೋಗ್ಯ ತಪಾಸಣೆ ಸೇವೆ.

ಕೊಳ್ಳೇಗಾಲ:ಪಟ್ಟಣದ ಎಂ ಜಿ‌ ಎಸ್‌ ವಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ತಪಾಸಣೆ ಶಿಬಿರವನ್ನು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಬೃಹತ್ ಆರೋಗ್ಯ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು ಇಂದಿನ ಮೇಳದಲ್ಲಿ 12,047 ಮಂದಿ ತಪಾಸಣೆಗೆ ಒಳಗಾಗಿ ವಿವಿಧ ಆರೋಗ್ಯ ಸೇವೆಯನ್ನು ಪಡೆದುಕೊಂಡಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಎಂಜಿಎಸ್‍ವಿ ಕಾಲೇಜಿನಲ್ಲಿ ಅಚ್ಚುಕಟ್ಟಾಗಿ ಆರೋಗ್ಯ ಶಿಬಿರವನ್ನು ಏರ್ಪಾಡಿಸಲಾಗಿತ್ತು. ಬೆಳಿಗ್ಗಿನಿಂದಲೇ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಬರತೊಡಗಿದರು. 11 ಗಂಟೆಯ ವೇಳೆಗೆ ಸುಮಾರು 7 ಸಾವಿರ ಮಂದಿ ನೊಂದಾಯಿಸಿದ್ದರು. ಸಂಜೆಯ ವೇಳೆಗೆ 12,047 ಮಂದಿ ವೈದ್ಯಕೀಯ ಸೇವೆ ಪಡೆದುಕೊಂಡಿದ್ದಾರೆ.

ಬೃಹತ್ ಶಿಬಿರದಲ್ಲಿ ವಿವಿಧ ವಿಭಾಗಗಳು ಇದ್ದು, ತಜ್ಞ ವೈದ್ಯರು ಪರೀಕ್ಷಿಸಿ ಉಚಿತವಾಗಿ ಔಷಧ ವಿತರಣೆಗೆ ಕೌಂಟರ್ ಗಳನ್ನು ತೆರೆಯಲಾಗಿತ್ತು. ವಿಶೇಷ ಅತ್ಯಾಧುನಿಕ ವೈದ್ಯಕೀಯ ಪರೀಕ್ಷಾ ಉಪಕರಣಗಳನ್ನು ಒಳಗೊಂಡ ತಪಾಸಣಾ ವಾಹನಗಳು ಸಹ ಇದ್ದವು.

ಮೇಳಕ್ಕೆ ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ನೊಂದಾಯಿಸಿರುವ ಜನರನ್ನು ಆರೋಗ್ಯ ತಪಾಸಣೆಗಾಗಿ ಕರೆತರಲಾಗಿತ್ತು. ಆರೋಗ್ಯ ಮೇಳದಲ್ಲಿ ಕುಡಿಯುವ ನೀರು, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ನಿರೀಕ್ಷೆಗೂ ಮೀರಿ ಕೊಳ್ಳೇಗಾಲದಲ್ಲಿ ಏರ್ಪಡಿಸಿದ್ದ ಆರೋಗ್ಯ ಮೇಳ ಯಶಸ್ಸು ಕಂಡಿದೆ. ‌

ವರದಿ ಆರ್ ಉಮೇಶ್ ಮಲಾರಪಾಳ್ಯ