ಶಾಸಕರು, ಜಿಲ್ಲಾಧಿಕಾರಿಯವರಿಂದ ನಗರದ ರಸ್ತೆ ಕಾಮಗಾರಿ ಪರಿಶೀಲನೆ.
ಚಾಮರಾಜನಗರ:ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ನಗರದ ಬಿ. ರಾಚಯ್ಯ ಜೋಡಿರಸ್ತೆ ಅಗಲೀಕರಣ ಹಾಗೂ ನ್ಯಾಯಾಲಯ ರಸ್ತೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ಪಟ್ಟಣದ ರಸ್ತೆಗಳ ಅಭಿವೃದ್ಧಿ ಸಂಬಂಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ದಾಖಲಾದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯೇ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಆರಂಭವಾದ ಸ್ಥಳ ಪರಿಶೀಲನೆ ಕಾರ್ಯದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಯವರು ರಸ್ತೆಯುದ್ದಕ್ಕೂ ಸಂಚರಿಸಿ ರಸ್ತೆ ಅಗಲೀಕರಣಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದರು.
ನಗರದ ಕರಿನಂಜನಪುರ ರಸ್ತೆಯ ಎರಡು ಬದಿಗಳಲ್ಲಿ ಒತ್ತುವರಿಯಾಗಿರುವ ಭಾಗಗಳ ಬಗ್ಗೆ ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದು ಒತ್ತುವರಿಯಾಗಿರುವ ರಸ್ತೆಯ ವಿಸ್ತೀರ್ಣದ ಅಳತೆಯನ್ನು ಪರಿಶೀಲಿಸಿದರು.
ಕರಿನಂಜನಪುರ ರಸ್ತೆಯಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನರ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು. ಗುಣಮಟ್ಟದ ಕಾಮಗಾರಿ ಆಗಬೇಕು. ಮನೆ ಕಟ್ಟಲು ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಜಾಗ ಒತ್ತುವರಿಯಾಗದಂತೆ ಜವಾಬ್ದಾರಿ ವಹಿಸುವಂತೆ ಶಾಸಕರು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ನಗರದ ಬಿ. ರಾಚಯ್ಯ ಜೋಡಿರಸ್ತೆಯಲ್ಲಿ ಕಟ್ಟಿಕೊಂಡಿರುವ ಚರಂಡಿಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದರು. ಜೋಡಿರಸ್ತೆಯ ಕಾಮಗಾರಿ ಕುರಿತು ನಗರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಪರಿಹಾರ ಸಂಬಂಧ ಅಗತ್ಯ ಪ್ರಸ್ತಾವನೆ ತಯಾರಿಸಿ ಸಲ್ಲಿಸುವಂತೆ ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ರಸ್ತೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಒಳಗಾಗಬಾರದು. ರಸ್ತೆ ಅಗಲೀಕರಣದಿಂದ ಆಸ್ತಿ ಕಳೆದುಕೊಂಡಿರುವವರ ಪಟ್ಟಿ ಮಾಡಿ ಪರಿಹಾರ ವಿತರಣೆ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಿಕೊಡಲಾಗುವುದು ಎಂದರು.
ನಗರಸಭಾ ಸದಸ್ಯರಾದ ಆರ್.ಪಿ. ನಂಜುಂಡಸ್ವಾಮಿ, ಎಂ.ಆರ್. ರಾಜಪ್ಪ, ಮಹೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಟರಾಜು, ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರಿಜಮ್ಮ, ಕಂದಾಯ ನಿರೀಕ್ಷಕರಾದ ಶರವಣ, ಹಿರಿಯ ಆರೋಗ್ಯ ನಿರೀಕ್ಷರಾದ ಮಂಜುನಾಥ್, ನಾರಾಯಣ್, ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಮಚಂದ್ರ, ಸಮುದಾಯ ಸಂಘಟನಾಧಿಕಾರಿ ವೆಂಕಟನಾಯಕ್, ಇತರರು ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ