ಸಮಸ್ಯೆಗಳ ಆಗರ ತೂಬಗೆರೆ ಪಂಚಾಯ್ತಿ
ದೊಡ್ಡಬಳ್ಳಾಪುರ: ಗ್ರಾಮಾಂತರ
ತೂಬಗೆರೆ ಹೋಬಳಿ ಸಮಸ್ಯೆಗಳ ಆಗರವಾಗಿದೆ. ಸ್ಥಳೀಯ ಆಡಳಿತದ ಕೇಂದ್ರಸ್ಥಾನವಾಗಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಗ್ರಾಮ ಪಂಚಾಯಿತಿ ಕಾರ್ಯವೈಖರಿಗೆ ಜನ ಸಾಮಾನ್ಯರಾದಿಯಾಗಿ ಪಂಚಾಯ್ತಿ ಸದಸ್ಯರು ಕೂಡ ಅತೃಪ್ತಿ, ಆಕ್ರೋಶ ಹೊರಹಾಕಿದ್ದಾರೆ.
ಗ್ರಾಮದ ನಿವಾಸಿ, ಅಂಗವಿಕಲರಾದ ರಮೇಶ್ ಎಂಬುವರು ಕಳೆದ 10 ಹತ್ತು ವರ್ಷಗಳಿಂದ ನಿವೇಶನಕ್ಕಾಗಿ ಪಂಚಾಯ್ತಿ, ಸರ್ಕಾರಿ ಕಚೇರಿಗಳ ಮೆಟ್ಟಿಲು ಸವೆಸಿದರೂ ಸೂರು ಕಲ್ಪಿಸಿಕೊಡುವಲ್ಲಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ.
ಗ್ರಾ.ಪಂ ಅಧ್ಯಕ್ಷರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ತಾ.ಪಂ.ಇಒ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಜಿಲ್ಲಾಧಿಕಾರಿ ಸೇರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಕೊಟ್ಟರೂ ಸೂರು ಮಾತ್ರ ಮರೀಚಿಕೆಯಾಗಿದೆ.
ಈಚೆಗೆ ನಡೆದ ಗ್ರಾಮ ಸಭೆಯು ರಮೇಶ್ ಅವರಿಗೆ ನಿವೇಶನ ನೀಡಲು ಅನುಮೋದನೆ ನೀಡಿತ್ತು. ಇಷ್ಟಾದರೂ ಗ್ರಾಮ ಪಂಚಾಯಿತಿ ಪಿಡಿಒ ತಲೆ ಕೆಡಿಸಿಕೊಂಡಿಲ್ಲ ಎಂದು ಸ್ವತಃ ಗ್ರಾ.ಪಂ. ಸದಸ್ಯರಾದ ಕೃಷ್ಣಪ್ಪ ಕಿಡಿಕಾರಿದರು.
ಗ್ರಾಮ ಪಂಚಾಯಿತಿ ವತಿಯಿಂದ ಕನಿಷ್ಠ ಮೂಲ ಸೌಕರ್ಯ ಕೂಡ ಕಲ್ಪಿಸುತ್ತಿಲ್ಲ. ವಾರ್ಡಿನಲ್ಲಿ ಒಂದು ಬೀದಿ ದೀಪ ಅಳವಡಿಸಿಕೊಡುವಂತೆ 15 ದಿನಗಳಿಂದ ಮನವಿ ಮಾಡಿದರೂ ಪಿಡಿಒ ಕೇಳಿಸಿಕೊಳ್ಳುತ್ತಿಲ್ಲ. ರಾತ್ರಿ ವೇಳೆ ಓಡಾಡುವಾಗ ವೃದ್ಧರು ಬಿದ್ದು ಗಾಯಗೊಂಡಿದ್ದಾರೆ. ವಾರ್ಡ್ ಸದಸ್ಯರಾಗಿ ಬೀದಿ ದೀಪ ಹಾಕಿಸಲಾಗದೇ ಎಂದು ಛೀಮಾರಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಂಡಸಂದ್ರ ಹಾಗೂ ನರಗನಹಳ್ಳಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ವಿಳಂಬವಾಗಿದೆ. ನರೇಗಾ ಕಾಮಗಾರಿಗಳ ಅನುಷ್ಟಾನದ ಪರಿಶೀಲನೆ ನಡೆಸಿಲ್ಲ. ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡಿಲ್ಲ. ತೂಬಗೆರೆ ವಾರ್ಡ್ 1ರ ಬಾರ್ ಸಮೀಪ ಮನೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಸ್ಥಳಾಂತರಿಸಲು ಕೆಇಬಿ ಅವರಿಗೆ ಪತ್ರ ಬರೆಯಲು ಪಿಡಿಒಯಿಂದ ಆಗಿಲ್ಲ ಎಂದು ಆರೋಪಿಸಿದರು.
ಇನ್ನೂ ತೂಬಗೆರೆ ಬಸ್ ನಿಲ್ದಾಣದಲ್ಲಿರುವ ಹೈಟೆಕ್ ಶೌಚಾಲಯ ಉದ್ಘಾಟನೆಗೊಂಡು ಐದು ವರ್ಷ ಕಳೆದರೂ ಉಪಯೋಗಕ್ಕೆ ಬಾರದಂತಾಗಿದೆ. ಮೂರು ಬಾರಿ ರಿಪೇರಿ ಹೆಸರಿನಲ್ಲಿ ಖರ್ಚು ಮಾಡಿ ಬೀಗ ಹಾಕಿದ್ದಾರೆ. ಬೇರೆ ಬೇರೆ ಊರುಗಳಿಂದ ನಿತ್ಯ ನೂರಾರು ಜನ ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಪರಿತಪಿಸುವಂತಾಗಿದೆ.
ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ-ತೂಬಗೆರೆ ಮಾರ್ಗವಾಗಿ ಹೋಗಿರುವ ಕಾಚಹಳ್ಳಿ ಮುಖ್ಯ ರಸ್ತೆಯಲ್ಲಿ ಹಂಪ್ ಅಳವಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮಾತನಾಡಿ, ಒಬ್ಬರಿಗೆ ನಿವೇಶನ ಕೊಟ್ಟರೆ ಇನ್ನೊಬ್ಬರು ಬೇಕು ಎನ್ನುತ್ತಾರೆ. ಆದ್ದರಿಂದ ಜ.18ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡು ಅವರಿಗೆ ನಿವೇಶನ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಅಂಗವಿಕಲ ರಮೇಶ್ ಮಾತನಾಡಿ, ಸುಮಾರು 10 ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಅಲೆಯುತ್ತಿದ್ದೇನೆ. ನನಗೆ ಮನೆ ಇಲ್ಲ, ಯಾರೂ ಕೂಡ ಬಾಡಿಗೆಗೆ ಮನೆ ಕೊಡುತ್ತಿಲ್ಲ. ಸಚಿವರು, ಶಾಸಕರು ಹೇಳಿದರೂ ಸಹ ಪಂಚಾಯಿತಿಯವರು ಕ್ಯಾರೆ ಎನ್ನುತ್ತಿಲ್ಲ ಎಂದು ಅಳಲು ತೋಡಿಕೊಂಡರು.