ನಾರಾಯಣ ಗೌಡರ ಬಂಧನ ಖಂಡನೀಯ..ಚಂದ್ರಶೇಖರ್
ದೊಡ್ಡಬಳ್ಳಾಪುರ: ಕನ್ನಡದ ವಿಚಾರದಲ್ಲಿ ಕನ್ನಡಪರ ಹೋರಾಟಗಾರರನ್ನು ಬಂಧಿಸಿ ಕನ್ನಡಪರ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಇದನ್ನು ಕರವೇ ಕನ್ನಡಿಗರ ಬಣ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಕರವೇ ಕನ್ನಡಿಗರ ಬಣದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಚಂದ್ರು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಆಂಗ್ಲ ಭಾಷೆ ಬಳಸಿ ಕನ್ನಡವನ್ನು ಕಡೆಗಣಿಸಿರುವುದನ್ನು ಖಂಡಿಸಿ ಹೋರಾಟ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಬಂಧಿಸಿರುವುದು ಅಕ್ಷಮ್ಯ. ಕನ್ನಡಪರ ಹೋರಾಟಗಾರರಿಂದ ಯಾವುದೇ ಸಾರ್ವಜನಿಕ ಅಸ್ತಿ ನಷ್ಟವಾಗಿಲ್ಲ. ಆದರೂ ಸರ್ಕಾರ ಹೋರಾಟಗಾರರನ್ನು ವಿನಾಕಾರಣ ಬಂಧಿಸಿ ಕಿರುಕುಳ ನೀಡುತ್ತಿದೆ. ನಾಮಫಲಕಗಳಲ್ಲಿ ಯಾವುದೇ ಭಾಷೆಯಿರಲಿ ಆದರೆ ಕನ್ನಡ ಭಾಷೆ ಪ್ರಧಾನವಾಗಿರಲಿ. ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಭಾಷೆಯಿರಬೇಕು ಎಂದು ಸರ್ಕಾರದ ಆದೇಶವಿದೆ. ಆದರೆ ಈ ಆದೇಶವನ್ನು ಸರ್ಕಾರಿ ಅಧಿಕಾರಿಗಳೇ ಪಾಲಿಸುತ್ತಿಲ್ಲ. ಸರ್ಕಾರ ಮಾಡಬೇಕಾದ ಕೆಲಸವನ್ನು ಕನ್ನಡಪರ ಹೋರಾಟಗಾರರು ಮಾಡುತ್ತಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಚಂದ್ರು, ನಮ್ಮ ತೆರಿಗೆ ದುಡ್ಡನ್ನು ಲೂಟಿ ಮಾಡುತ್ತಿರುವವರನ್ನು ಬಂದಿಸಬೇಕು. ಅದನ್ನು ಹೋರಾಟಗಾರರ ಮೇಲೆ ಪ್ರಯೋಗಿಸುವುದು ತರವಲ್ಲ. ನಿಜಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕನ್ನಡ ಭಾಷೆಯ ಮೇಲೆ ಅಭಿಮಾನವಿದ್ದರೆ ಹೋರಾಟಗಾರರಿಗೆ ನೈತಿಕ ವಾಗಿ ಬೆಂಬಲಿಸಲಿ. ಅದು ಬಿಟ್ಟು ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ಕನ್ನಡ ಹೋರಾಟ ಗಾರರಿಗೆ ತೊಂದರೆ ಕೊಡುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಲಸಿಗರ ಮಾಲ್ಗಳು ಹಾಗೂ ವ್ಯಾಪಾರ ಮಳಿಗೆಗಳಲ್ಲಿ ಕನ್ನಡ ಕಡೆಗಣಿಸಿರುವುದನ್ನು ನ್ಯಾಯತವಾಗಿ ಪ್ರಶ್ನೆ ಮಾಡುತ್ತೇವೆ. ಆಗ ವಲಸಿಗ ಗುಂಡಾಗಲಿಂದಾಗುವ ದಾಳಿಗಾಗಿ ನಮಗೆ ಸರ್ಕಾರ ನಮಗೆ ರಕ್ಷಣೆ ಕೊಡಬೇಕು. ಇಲ್ಲವಾದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ. ರಾಜ್ಯವಿರೋಧಿ ಕೃತ್ಯಗಳನ್ನು ಎಸಗಿರುವವರ ಮೇಲಿರುವ ಮೊಕದ್ದಮ್ಮೆಯನ್ನು ಸರ್ಕಾರ ವಾಪಸು ಪಡೆದಿದೆ. ಆದರೆ ಕನ್ನಡಪರ ಹೋರಾಟಗಾರರ ಮೇಲಿರುವ ಕೇಸುಗಳನ್ನು ಯಾವುದೇ ಸರ್ಕಾರ ಹಿಂಪಡೆದಿಲ್ಲ. ನಿಜಕ್ಕೂ ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಭಾಷೆ ವಿಚಾರದಲ್ಲಿ ವಲಸಿಗರಿಂದ ಅನ್ಯಾಯವಾದಲ್ಲಿ ಅದನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರ ಇದನ್ನು ಹೀಗೆ ಮುಂದುವರೆಸಿದರೆ ರಾಜ್ಯವ್ಯಾಪಿ ಕನ್ನಡಿಗರು ಹೋರಾಟವನ್ನು ತೀವ್ರ ಗೊಳಿಸಲಿದ್ದಾರೆ. ಆದ್ದರಿಂದ ಈ ಕೂಡಲೇ ಬಂದನದಲ್ಲಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಚಂದ್ರಶೇಖರ್ ಹೇಳಿದರು.
ಸುದ್ದಿಗೊಷ್ಟಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರವಿಂದ್, ಮಹಿಳಾ ಘಟಕದ ಉಪಾಧ್ಯಕ್ಷೆ ಕಮಲಾಕ್ಷಿ, ಮುಖಂಡರಾದ ರಮೇಶ್, ಶಿವಾನಂದ್, ವಿನಯ್ ಹಾಜರಿದ್ದರು.