ದೊಡ್ಡಬಳ್ಳಾಪುರ:ಸಾರ್ವಜನಿಕ
ಸಂಪರ್ಕ ಸಭೆಗಳನ್ನು ಏರ್ಪಡಿಸುವುದರಿಂದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಶೀಘ್ರವಾಗಿ ಇತ್ಯರ್ಥ ಪಡಿಸಬಹುದು ಎಂದು ಆಹಾರ ನಾಗರೀಕ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಹೇಳಿದರು.
ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಎಸ್-ಎಸ್ ಘಾಟಿ ಗ್ರಾಮ ಪಂಚಾಯತಿ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್ ಎಸ್ ಘಾಟಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡತ್ತಾ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಒಂದು ತಿಂಗಳೊಳಗೆ ಪರಿಹರಿಸಲಾಗುವುದು ಎಸ್, ಎಸ್ ಘಾಟಿ ಸುಬ್ರಮಣ್ಯ ಕ್ಷೇತ್ರ ಬಹಳಷ್ಟು ಪ್ರಸಿದ್ಧಿಯಾಗಿದ್ದು ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಎಲ್ಲಾ ರೀತಿಯ ನೆರವು ನೀಡಲಾಗುವುದು.ತೂಬಗೆರೆ ಹೋಬಳಿಯು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು ,ಈ ಹೋಬಳಿಯನ್ನು ಕಡೆಣಿಸದೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಕುಂದು ಕೊರತೆ ಸಭೆ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಕುಡಿಯುವ ನೀರು,ಜಾನುವಾರುಗಳಿಗೆ ಮೇವು ವಿತರಣೆ,ಬಡವರಿಗೆ ನಿವೇಶನ ಹಂಚಿಕೆ,ರಸ್ತೆ ದುರಸ್ತಿ,ಸ್ಮಶಾನ ಭೂಮಿ ಕೋರಿಕೆ,ಚರಂಡಿ ನಿರ್ಮಾಣ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿಸಾರ್ವಜನಿಕರಿಂದ ಗ್ರಾಮಗಳಿಗೆ ರಸ್ತೆ ಸಂಪರ್ಕ,ಗೋಮಾಳ ಒತ್ತುವರಿ,ಹಕ್ಕುಪತ್ರ ಹಂಚಿಕೆ,ಸ್ಮಶಾನ ಜಾಗ,ಪಡಿತರ ಚೀಟಿ ಕುಡಿಯುವ ನೀರು, ಹಂಚಿಕೆ,ಶೌಚಾಲಯ ನಿರ್ಮಾಣ,ನಿವೇಶನ ಹಂಚಿಕೆ ಸೇರಿದಂತೆ ಒಟ್ಟು 61 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಬೆಂ ಗ್ರಾ ಜಿಲ್ಲಾಧಿಕಾರಿ ಡಾ.ಶಿವಶಂಕರ.ಎನ್,ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧಾ, ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್,ಅಪರ ಪೋಲಿಸ್ ವರಿಷ್ಟಾಧಿಕಾರಿ ನಾಗರಾಜ್,ದೊಡ್ಡಬಳ್ಳಾಪುರ ತಹಸಿಲ್ದಾರ್ ವಿದ್ಯಾ ವಿಭಾ ರಾಥೋಡ್,ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು,ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಚೆನ್ನಳ್ಳಿ ರಾಜಣ್ಣ, ಮತ್ತು ಚುನಾಯಿತ ಪ್ರತಿನಿಧಿಗಳು ಗ್ರಾಮಪಂಚಾಯ್ತಿ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.