ಜನವರಿ 22ರಂದು ಕೊಳ್ಳೇಗಾಲ ಪಟ್ಟಣದಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜನೆ : ಸಕಲ ಸಿದ್ದತೆಗೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಸೂಚನೆ
ಚಾಮರಾಜನಗರ, ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಜನವರಿ 22ರಂದು ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಲು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿಂದು ಬೃಹತ್ ಆರೋಗ್ಯ ಶಿಬಿರ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಆರೋಗ್ಯ ಸಚಿವರು ಮಾತನಾಡಿದರು.
ಜನರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುವ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಕೊಳ್ಳೇಗಾಲ ಪಟ್ಟಣದ ಎಂ.ಜಿ.ಎಸ್.ವಿ ಕಾಲೇಜು ಆವರಣದಲ್ಲಿ ಜನವರಿ 22ರಂದು ಏರ್ಪಡಿಸಬೇಕು. ಈ ತಪಾಸಣಾ ಶಿಬಿರದಲ್ಲಿ ಹಲವು ಬಗೆಯ ರೋಗಗಳ ತಪಾಸಣೆಗೆ ಅವಶ್ಯವಿರುವ ಸಕಲ ಸಿದ್ದತೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಯಾವುದೇ ವ್ಯವಸ್ಥೆಗಳಿಗೆ ಕೊರತೆ ಬಾರದಂತೆ ಈಗಿನಿಂದಲೇ ಸಿದ್ದತಾ ಕಾರ್ಯಗಳನ್ನು ಆರಂಭಿಸುವಂತೆ ಸಚಿವರು ತಿಳಿಸಿದರು.
ಆರೋಗ್ಯ ತಪಾಸಣೆ, ಚಿಕಿತ್ಸೆ, ಸಲಹೆಗೆ ತಜ್ಞ ವೈದ್ಯರು, ವೈದ್ಯಕೀಯ ಪ್ರಮುಖರನ್ನು ನಿಯೋಜಿಸಬೇಕು. ನರ್ಸಿಂಗ್, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇವೆಯನ್ನು ಬಳಸಿಕೊಳ್ಳಬೇಕು. ತಪಾಸಣಾ ಸಲಕರಣೆಗಳು, ಆಧುನಿಕ ತಂತ್ರಜ್ಞಾನದ ವೈದ್ಯಕೀಯ ಪರಿಕರಗಳು ಆರೋಗ್ಯ ಶಿಬಿರದಲ್ಲಿ ಇರಬೇಕು. ಅತ್ಯಾಧುನಿಕ ತಪಾಸಣಾ ಸಲಕರಣೆಗಳನ್ನು ಒಳಗೊಂಡ ವಿಶೇಷ ಆರೋಗ್ಯ ಸೌಲಭ್ಯದ ವಾಹನ ಸಹ ಬೆಂಗಳೂರಿನಿಂದ ಕಳುಹಿಸಲಾಗುತ್ತದೆ. ಜಿಲ್ಲೆಯಲ್ಲಿ ಲಭ್ಯವಿರುವ ಆರೋಗ್ಯ ಇಲಾಖೆಯ ವಾಹನಗಳನ್ನು ಬಳಸಿಕೊಳ್ಳಬೇಕು ಎಂದರು.
ಹೆಚ್ಚು ಜನರು ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆಯಲು ಪೂರಕವಾಗಿರುವ ಸಿದ್ದತೆಗಳನ್ನು ಮಾಡಬೇಕು. ಪ್ರತ್ಯೇಕ ಕೌಂಟರ್‍ಗಳು ಇರಬೇಕು. ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ, ಆಸನಗಳು ಹೆಚ್ಚು ಒದಗಿಸಬೇಕು. ಊಟ, ಉಪಹಾರ, ಕುಡಿಯುವ ನೀರು, ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಇರುವಂತೆ ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಆರೋಗ್ಯ ಶಿಬಿರದಲ್ಲಿ ನಿರಂತರ ವಿದ್ಯುತ್ ಪೂರೈಕೆ ಇರಬೇಕು. ಜನರೇಟರ್ ವ್ಯವಸ್ಥೆ ಕಲ್ಪಿಸಬೇಕು. ತಪಾಸಣೆಗೆ ಬರುವವರ ನೋಂದಣಿ ಮಾಡಬೇಕು. ಔಷಧಗಳನ್ನು ವಿತರಿಸಬೇಕು. ಪರಿಪೂರ್ಣವಾದ ವ್ಯವಸ್ಥೆಗಳೊಂದಿಗೆ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಿ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ತಲುಪಿಸುವ ಮಹತ್ತರ ಜವಬ್ದಾರಿಯನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಚಿದಂಬರ, ವೈದ್ಯಕೀಯ ಕಾಲೇಜಿನ ನಿರ್ದೇಶಕರು ಹಾಗೂ ಡೀನ್ ಡಾ. ಮಂಜುನಾಥ್, ತಹಶೀಲ್ದಾರ್ ಮಂಜುಳ, ಡಿವೈಎಸ್‍ಪಿ ಸೋಮ್ಮಣ್ಣಗೌಡ ಹಿರಿಯ ವೈದ್ಯಾಧಿಕಾರಿಗಳು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್