ಕನಕದಾಸರು ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಿ… ಪ್ರೊ. ರವಿಕಿರಣ್

ದೊಡ್ಡಬಳ್ಳಾಪುರ.,. ದಾಸಸಾಹಿತ್ಯದಲ್ಲಿ ಕನಕ ದಾಸರು ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ಸಾಹಿತ್ಯದಲ್ಲಿ ಕನಕ ದಾಸರು ಮೊದಲ ಬಂಡಾಯ ಕವಿಯಾಗಿ ಕಾಣ ಸಿಗುತ್ತಾರೆ. ಎಂದು ಪ್ರೊ. ರವಿಕಿರಣ್ ಅಭಿಪ್ರಾಯ ಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸ ಶ್ರೇಷ್ಠ ಕನಕ ದಾಸರ 536ನೇ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರವಿಕಿರಣ್,15ನೇ ಶತಮಾನದಲ್ಲಿ ಸಮಾನತೆ ಬಗ್ಗೆ ದನಿ ಎತ್ತಿದ್ದ ಕನಕ ದಾಸರು ಒಬ್ಬ ಕವಿಯಾಗಿ, ಕಲಿಯಾಗಿ, ದಕ್ಷ ಆಡಳಿತಗಾರನಾಗಿ, ದರ್ಶನಿಕನಾಗಿ ಹೀಗೆ ಹಲವು ರೂಪಗಳಲ್ಲಿ ನಮಗೆ ಕಾಣ ಸಿಗುತ್ತಾರೆ. ಸಮಾಜದ ಮೇಲು ಕೀಳು ಗಳನ್ನು ಎತ್ತಿ ತೋರಿಸಿ ವೈದಿಕ ಪರಂಪರೆ ಗಳನ್ನು ಪರೋಕ್ಷವಾಗಿ ವಿರೋಧಿಸಿ ಮುಂದುವರೆದವರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಅದಕ್ಕಿಂತ ಮುಖ್ಯವಾಗಿ ಸಾಮಾಜಿಕ ಮೌಢ್ಯಗಳನ್ನು ತೊಡೆದು ಹಾಕುವಲ್ಲಿ ಕನಕರ ಪಾತ್ರ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಮೋಹನ ತರಂಗಿಣಿ, ರಾಮ ಚರಿತ ಮಾನಸ, ರಾಮದಾನ್ಯ ಚರಿತೆ ಸೇರಿದಂತೆ ಹಲವಾರು ಕೃತಿಗಳ ಮೂಲಕ ಸಮಾಜವನ್ನು ಕಾಡುತ್ತಿದ್ದ ಜಾತಿ ಸಂಘರ್ಷ, ಮೌಢ್ಯಚರಣೆ ಮೇಲು ಕೀಳು ಎಂಬ ಅನಿಷ್ಟ ಪದ್ಧತಿಗಳ ತೆರವಿಗೆ ಶ್ರಮಿಸಿದವರಲ್ಲಿ ಕನಕ ದಾಸರು ಅಗ್ರಗಣ್ಯರಾಗಿ ಕಾಣುತ್ತಾರೆ. ಕುಲ ಕುಲ ವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ಏನಾದರು ಬಲ್ಲಿರಾ ಎಂಬ ಗದ್ಯ ಸರ್ವಕಾಲಿಕ ಸತ್ಯ. ಪಕ್ಕಾ ಅಧಿಕೇಶವನ ಭಕ್ತರಾದ ಕನಕದಾಸರು ಸುಮಾರು 300ಕ್ಕೂ ಹೆಚ್ಚು ಮುಂಡಿಗೆ ಗಳನ್ನು ರಚಿಸಿರುವುದು ಅವರ ಹೆಗ್ಗಳಿಕೆ ಎಂತಲೇ ಹೇಳಬಹುದು. ಕನಕರ ಭಕ್ತಿಗೆ ಮೆಚ್ಚಿ ಉಡುಪಿ ಶ್ರೀ ಕೃಷ್ಣನ ಮೂರ್ತಿ ತಿರುಗಿ ದರ್ಶನ ವಿತ್ತಿದ್ದು ಒಂದು ಪ್ರಸಂಗ ಎನ್ನುವುದಕ್ಕಿಂತ ವೈದಿಕತೆಯಿಂದ ಶೂದ್ರತ್ವದೆಡೆಗೆ ದೈವದ ನಡೆ ಎನ್ನಬಹುದು ಎಂದು ರವಿಕಿರಣ್ ಹೇಳಿದರು.
ಶಾಸಕ ಧೀರಜ್ ಮುನಿರಾಜ್ ಮಾತನಾಡಿ ಕನಕದಾಸರು ಮಹಾನ್ ಭಕ್ತಿಗೆ ಹೆಸರದವರು. ತನ್ನ ಭಕ್ತಿಯಿಂದ ಶ್ರೀ ಕೃಷ್ಣನನ್ನೇ ಒಳಿಸಿಕೊಂಡರು. ಇಂದಿಗೂ ಅವರ ಕೀರ್ತನೆಗಳು ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಮೇಲುಕೀಳು, ಜಾತಿ ತಾರತಮ್ಯವನ್ನು ಹತ್ತಿಕ್ಕುವುದರಲ್ಲಿ ಕನಕರ ಪಾತ್ರ ಅತ್ಯಂತ ಹಿರಿದು. ಅವರ ಆದರ್ಶಗಳನ್ನು ಮೈ ಗೂಡಿಸಿಕೊಂಡರೆ ಕನಕದಾಸರ ಜಯಂತಿಗೆ ಒಂದು ಅರ್ಥ ಬರುತ್ತದೆ.. ಎಂದು ಹೇಳಿದರು.
ತಾಲೂಕು ದಂಡ ಅಧಿಕಾರಿ ಶ್ರೀಮತಿ ವಿಭಾ ವಿದ್ಯಾ ರಾಠೋಡ್ ಮಾತನಾಡಿ ಕನಕದಾಸ ರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಅವರ ಪ್ರತಿಯೊಂದು ನಡೆ, ಹಾಗೂ ಕೃತಿಗಳು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿರುವಂತದ್ದು. ಬರೀ ಜಯಂತಿಗಳ ಆಚರಣೆ ಗಳಿಂದ ಏನೂ ಪ್ರಯೋಜನಗಳಿಲ್ಲ. ಕನಕ, ಬುದ್ಧ, ಬಸವ ಮುಂತಾದ ಮಹನೀಯರ ಆದರ್ಶ ಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಂಡೇ ನರಸಿಂಹ ಮೂರ್ತಿ, ಕಾರ್ಯದರ್ಶಿ ರೈಲ್ವೆ ಸ್ಟೇಷನ್ ಮಲ್ಲೇಶ್ ಗೌರವಾಧ್ಯಕ್ಷ ತಿಮ್ಮೆಗೌಡ, ಅರುಣ್ ಕುಮಾರ್, ನಾಗರಾಜ್, ಕನ್ನಡ ಪಕ್ಷದ ಸಂಜೀವ್ ನಾಯಕ, ಅಂಜಿ, ಮುನಿಪಾಪಯ್ಯ, ಪರಮೇಶ್, ಛಲವಾದಿ ಮಹಾಸಭಾದ ಅಧ್ಯಕ್ಷ ಗುರುರಾಜಪ್ಪ, ರೈತ ಸಂಘದ ಸುಲೋಚನಮ್ಮ, ಮುತ್ತೇಗೌಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮುಂತಾದವರು ಭಾಗವಹಿದ್ದರು.