ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆ, ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್
ಚಾಮರಾಜನಗರ: ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ದೇಶ ಸುಭದ್ರ ಹಾಗೂ ಸಾರ್ವಭೌಮ ರಾಷ್ಟ್ರವಾಗಿದ್ದು, ಪ್ರತಿಯೊಬ್ಬರು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ, ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಹಾಗೂ ರಾಷ್ಟ್ರನಾಯಕ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ದಿನದ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಸಾಮಾಜಿಕ ಅಸಮಾನತೆ ವಿರುದ್ದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆ, ವ್ಯಕ್ತಿತ್ವ ಎಲ್ಲರಿಗೂ ದಾರಿದೀಪವಾಗಿವೆ. ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನದಿಂದ ವಿಶ್ವದಲ್ಲಿಯೇ ಭಾರತ ಮಾದರಿ ಪ್ರಜಾಸತ್ಯಾತ್ಮಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಶೋಷಣೆ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಿಕ ಪರಿಹಾರದ ಮೂಲಭೂತ ಹಕ್ಕುಗಳನ್ನು ನೀಡಿ ಆಧುನಿಕ ಭಾರತದ ನಿರ್ಮಾತೃವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರು ಮತ್ತು ಆಡಳಿತಾಧಿಕಾರಿಗಳಾದ ಡಾ. ವಿ. ಷಣ್ಮುಗಂ ಅವರು ಸಂವಿಧಾನವು ಸಾಮಾಜಿಕ ಒಪ್ಪಂದದ ಮೇಲೆ ಸೃಷ್ಠಿಯಾಗಿರುವ ದಾಖಲೆಯಾಗಿದೆ. ಸಂವಿಧಾನವು ದೇಶದ ಕಾನೂನಿನ ಮಹಾನ್ ಗ್ರಂಥವಾಗಿದ್ದು, ಎಲ್ಲಾ ಕಾನೂನುಗಳು ಸಂವಿಧಾನಿಕ ವ್ಯಾಪ್ತಿಯಲ್ಲಿ ಬರಲಿವೆ. ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಧಾರ್ಮಿಕ ಜೀವನ ಸಂವಿಧಾನದಡಿ ರೂಪುಗೊಳ್ಳಲಿದೆ ಎಂದರು.
ದೇಶದಲ್ಲಿ ಆರೋಗ್ಯಕರ ಸಾಮಾಜಿಕ, ಅರ್ಥಿಕ, ರಾಜಕೀಯ ರಚನೆಯಿಂದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರನಿರ್ಮಾಣ ಸಾಧ್ಯವಾಗಲಿದೆ. ಸಾಮಾಜಿಕ ಕಲ್ಯಾಣ ಹಾಗೂ ರಾಷ್ಟ್ರ ರಕ್ಷಣೆಯೊಂದಿಗೆ ವ್ಯಕ್ತಿಯ ವ್ಯಕ್ತಿತ್ವವನ್ನು ಅಭಿವೃದ್ಧಿಗೊಳಿಸುವುದೇ ಸಂವಿಧಾನದ ಘನ ಉದ್ದೇಶವಾಗಿದೆ. ಪ್ರಸ್ತುತ ಹಾಗೂ ಮುಂದಿನ ಪೀಳಿಗೆಯ ಪ್ರಗತಿ ಸಂವಿಧಾನದ ಗುರಿಯಾಗಿದ್ದು, ಸಮಸಮಾಜದ ನಿರ್ಮಾಣ ಸಂವಿಧಾನದ ಆಶಯವಾಗಿದೆ. ಸಂವಿಧಾನದ ಅನುಷ್ಠಾನದಿಂದ ಸಮಾಜ ಚಲನೆಯಾಗಲಿದೆ. ಸಮೃದ್ಧ ಭಾರತ ಕಟ್ಟುವ ಶಕ್ತಿ ಸಂವಿಧಾನಕ್ಕಿದೆ. ಸಂವಿಧಾನಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಎಲ್ಲರಲ್ಲೂ ನಾಗರಿಕ ಪ್ರಜ್ಞೆ ಜಾಗೃತಗೊಳ್ಳಬೇಕು ಎಂದು ತಿಳಿಸಿದರು.
ಬುದ್ಧರ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಹಾಗೂ ಭ್ರಾತೃತ್ವ ಸಂದೇಶಗಳಿಂದ ಪ್ರಭಾವಿತರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಬ್ರಿಟಿಷರ ಆಳ್ವಿಕೆ ಹಾಗೂ ರಾಜಪ್ರಭುತ್ವದಿಂದ ಮುಕ್ತಗೊಂಡ ಭಾರತಕ್ಕೆ ಸಂವಿಧಾನ ರಚನೆ ಮೂಲಕ ದೇಶದ ಬದಲಾವಣೆಗೆ ಹೊಸ ರೂಪ ಕೊಟ್ಟರು. ಆಧುನಿಕ ಸಮಾಜ ನಿರ್ಮಾಣ ಅಲ್ಲಿಂದಲೇ ಆರಂಭವಾಗಿದೆ. ಅದರ ಫಲವಾಗಿಯೇ ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಪರಿವರ್ತನೆ ಎಂಬುದು ನಿರಂತರವಾಗಿ ಆಗುತ್ತಲೆ ಇದೆ ಎಂದು ಡಾ. ವಿ. ಷಣ್ಮುಗಂ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮೈಸೂರು ಜಿಲ್ಲೆಯ ಟಿ. ನರಸೀಪುರದ ನಳಂದ ಬುದ್ದ ವಿಹಾರದ ಬೋಧಿರತ್ನ ಬಂತೇಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ‘ಸಂವಿಧಾನ ಓದು’ ಪುಸ್ತಕವನ್ನು ವಿತರಿಸಲಾಯಿತು.
ನಗರದ ಪೇಟೆ ಪ್ರೈಮರಿ ಶಾಲೆಯ ಪುಟ್ಟ ವಿದ್ಯಾರ್ಥಿನಿ ನಸ್ರುಲ್ಲಾ ಫಾತಿಮಾ ಖಾನ್ ಮಾಡಿದ ಸಂವಿಧಾನ ಪೀಠಿಕೆ ವಾಚನ ಹಾಗೂ ವೇದಿಕೆ ಮುಂಭಾಗದಲ್ಲಿ ಕಲೆ ನಟರಾಜ್ ಹಾಗೂ ಜನಪದ ಮಹೇಶ್ ಅವರು ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮೀ. ಕೃಷಿ ಜಂಟಿ ನಿರ್ದೇಶಕರು ಹಾಗೂ ವಿಚಾರ ಸಂಕಿರಣದ ಉಪಸಮಿತಿ ಅಧ್ಯಕ್ಷರಾದ ಹಬೀಬ್, ನಗರಸಭೆ ಪೌರಾಯುಕ್ತ ರಾಮದಾಸ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಇತರರು ಕಾರ್ಯಕ್ರಮದಲ್ಲಿ ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮೀ, ಇತರರು ಮಾಲಾರ್ಪಣೆ ಮಾಡಿದರು.
ವರದಿ ಆರ್ ಉಮೇಶ್ ಚಾಮರಾಜನಗರ