ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಕೊಂಬುಡಿಕ್ಕಿಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು & ಹನೂರು ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ ಇಂದು ಬೆಳಿಗ್ಗೆ ಭೇಟಿ ನೀಡಿ ಅಹವಾಲುಗಳನ್ನು ಆಲಿಸಿದರು.
▪️ಹಾಡಿಯ ಜನರೊಂದಿಗೆ ಸಂವಾದ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಪಡಿತರ ಸರಿಯಾಗಿ ಸಿಗುತ್ತಿದೆಯೇ, ಅಕ್ಕಿ ಬದಲಿಗೆ ನೀಡುತ್ತಿರುವ ಹಣ ಖಾತೆಗೆ ಜಮೆಯಾಗುತ್ತಿದೆಯೇ, ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆಯೇ ಎಂದು ಪ್ರಶ್ನಿಸಿದರು.
▪️ಕೆಲ ಕುಟುಂಬಗಳಿಗೆ ಎಪಿಎಲ್ ಕಾರ್ಡ್ ಆಗಿದ್ದು, ಇದರಿಂದ ಸೌಲಭ್ಯ ಲಭಿಸುತ್ತಿಲ್ಲ. ಎಪಿಎಲ್ ಕಾರ್ಡ್ನ್ನು ಬಿಪಿಎಲ್ ಕಾರ್ಡ್ಗೆ ಬದಲಾಯಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿದರು. ಈ ಸಂಬಂಧ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸುವಂತೆ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
▪️ಹಾಡಿಯಲ್ಲಿರುವ ಅಂಗನವಾಡಿ ಸೋರುತ್ತಿದೆ. ಶಾಲಾ ಕಟ್ಟಡವು ಶಿಥಿಲಿವಾಗಿದೆ. ಹಾಡಿ ಸಂಪರ್ಕಿಸುವ ರಸ್ತೆ ಹಾಳಾಗಿದೆ. ಈ ಎಲ್ಲವನ್ನು ಸರಿಪಡಿಸಬೇಕೆಂದು ಜನರು ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವರು ಶಿಥಿಲಗೊಂಡಿರುವ ಶಾಲಾ ಅಂಗನವಾಡಿ ಕಟ್ಟಡಗಳನ್ನು ಸರಿಪಡಿಸಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
▪️ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ ಎಷ್ಟು ಜನರಿಗೆ ಮನೆ ಅಗತ್ಯವಿದೆ ಎಂಬ ಬಗ್ಗೆ ವಿವರವಾಗಿ ಸರ್ವೆ ಮಾಡಿ ವರದಿ ನೀಡಿ. ಅಗತ್ಯಕ್ಕನುಗುಣವಾಗಿ ಹಂತ ಹಂತವಾಗಿ ವಸತಿ ಯೋಜನೆ ಕಲ್ಪಿಸಿಕೊಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜನರಿಗೆ ಪಿಂಚಣಿ ಇನ್ನಿತರ ಸೌಲಭ್ಯಗಳು ತ್ವರಿತವಾಗಿ ಸಿಗಲು ಇಲ್ಲಿಯೇ ಪಿಂಚಣಿ ಅದಾಲತ್ ಆಯೋಜಿಸಬೇಕು ಎಂದು ಸಚಿವರು ತಿಳಿಸಿದರು.
▪️ನರೇಗಾ ಯೋಜನೆ ಪ್ರಯೋಜನ ತಲುಪುತ್ತಿದೆಯೇ ಎಲ್ಲರಿಗೂ ಉದ್ಯೋಗ ಲಭಿಸುತ್ತಿದೆಯೇ ಎಂದು ಪ್ರಶ್ನಿಸಿದರು. ಬೇಡಿಕೆಗೆ ಅನುಗುಣವಾಗಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ ಜನರಿಗೆ ನೆರವಾಗುವ ಕಾರ್ಯಗಳಿಗೆ ಅನುಕೂಲ ಮಾಡಿಕೊಡಿ ಎಂದು ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಇದೇ ವೇಳೆ ಸ್ಳಳೀಯರಿಗೆ ಸಚಿವರು ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಪ್ರಾಧಿಕಾರದ ಕಾರ್ಯದರ್ಶಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ