ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನಾಗಿ ದೊಡ್ಡಬಳ್ಳಾಪುರ ತಾಲೂಕನ್ನು ಪರಿಗಣಿಸಬೇಕು ಎಂದು ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದರು.
ನಗರದ ಬಾಬು ಜಗಜೀವನ್ ರಾಂ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವಿಭಜಿತ ಗ್ರಾಮಾಂತರ ಜಿಲ್ಲೆ ಆದಾಗಿನಿಂದಲೂ ದೊಡ್ಡಬಳ್ಳಾಪುರದಲ್ಲಿ ಉಪವಿಭಾಗಾಧಿಕಾರಿ ಕಚೇರಿಯಿದೆ. ಭೌಗೋಳಿಕವಾಗಿಯೂ ದೊಡ್ಡ ತಾಲೂಕಾಗಿದೆ. ಈಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಗಿದೆ ಎಂಬುದನ್ನು ನೆನಪಿಸಿದ್ದಾರೆ. ಆದ್ದರಿಂದ ತ್ವರಿತವಾಗಿ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಜಾಗದ ಕೊರತೆಯಿಂದ ದೊಡ್ಡಬಳ್ಳಾಪುರ-ದೇವನಹಳ್ಳಿ ಮಧ್ಯೆ ಜಿಲ್ಲಾಧಿಕಾರಿ ಕಚೇರಿ ಆರಂಭಿಸಲಾಗಿದೆ. ಜಿಲ್ಲಾಸ್ಪತ್ರೆಗಾಗಿ ನಗರದ ಸಿದ್ದೇನಾಯಕನಹಳ್ಳಿಯಲ್ಲಿ 9.38 ಎಕರೆ ಜಾಗ ಗುರುತಿಸಲಾಗಿದೆ. 2019ರಲ್ಲಿ ಜಿಲ್ಲಾಸ್ಪತ್ರೆ ಮನವಿ ಮಾಡಿದ ನಂತರ ಸರ್ಕಾರ 2022ರಲ್ಲಿ ಜಿಲ್ಲಾಸ್ಪತ್ರೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಒಟ್ಟು 164 ಕೋಟಿ ವೆಚ್ಚದ ಜಿಲ್ಲಾಸ್ಪತ್ರೆ ಕಾಮಗಾರಿಗೆ 2023 ರಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೂ ಈವರೆಗೆ ಕಾಮಗಾರಿ ಆರಂಭಿಸಿಲ್ಲ. ಕೂಡಲೇ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
. ನಗರದಲ್ಲಿ ಯುಜಿಡಿ ಸಮಸ್ಯೆ ವಿಪರೀತವಾಗಿದೆ. ನಾಗರಕೆರೆ, ಚಿಕ್ಕತುಮಕೂರು ಸೇರಿ ಹಲವು ಕೆರೆಗಳಿಗೆ ವಿಷಯುಕ್ತ ತ್ಯಾಜ್ಯ ನೀರು ಹರಿಸಲಾಗುತ್ತಿದೆ. ಇದರಿಂದ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಒಳಚರಂಡಿ ಹಾಗೂ ತ್ಯಾಜ್ಯ ನೀರು ಶುದ್ದೀಕರಣ ಘಟಕಕ್ಕಾಗಿ ಸರ್ಕಾರ 136 ಕೋಟಿ ಮೀಸಲಿರಿಸಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ಜಾಗ ಗುರುತಿಸಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದರು.
ನಗರೋತ್ಥಾನ ಹಾಗೂ 15ನೇ ಹಣಕಾಸು ಯೋಜನೆಯಡಿ ಹೆಚ್ಚಿನ ಅನುದಾನ ನೀಡಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ರಸ್ತೆ ಅಗಲೀಕರಣ, ಹೊಸ ರಿಂಗ್ ರಸ್ತೆ ನಿರ್ಮಿಸಬೇಕು ಎಂದು ಪ್ರಸ್ತಾಪಿಸಿದರು.
ಕಂದಾಯ, ನಗರಸಭೆ, ತಾ.ಪಂ. ಬಗ್ಗೆ ಹೆಚ್ಚಿನ ದೂರುಗಳು ಕೇಳಿ ಬರುತ್ತಿವೆ. ಜಾತಿ, ಆದಾಯ ಪ್ರಮಾಣ ಪತ್ರ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಫೌತಿ ಖಾತೆಗಳು ಆಗುತ್ತಿಲ್ಲ. ಸಣ್ಣ ಸಮಸ್ಯೆಗಳಿಗಾಗಿ ಸಾರ್ವಜನಿಕರು ದೂರದ ಊರುಗಳಿಂದ ಬಂದು ಹೋಗಬೇಕಾಗಿದೆ. ರೈತರು, ಸಾರ್ವಜನಿಕರು ಬಂದಾಗ ಸಹಕಾರ ನೀಡಬೇಕು. ಸಣ್ಣ ಸಮಸ್ಯೆಗಳು ಸಕಾಲದಲ್ಲಿ ಬಗೆಹರಿಸಿಕೊಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.