ದೊಡ್ಡಬಳ್ಳಾಪುರ:ಅ.19ರಂದು ನಗರಸಭೆಯಲ್ಲಿ ಶಾಸಕ ಧೀರಜ್ ಮುನಿರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಕುಂದು-ಕೊರತೆ ಸಭೆಯಲ್ಲಿ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಅದೆಷ್ಟು ‘ಅಯೋಗ್ಯರು’ ಎಂದು ಪರಿಸರವಾದಿ ಗಿರೀಶ್ ಅವರು ಹೇಳಿದ್ದರು. ಗಿರೀಶ್ ಮಾತಿಗೆ ಕೆರಳಿದ ಕೆಲ ನಗರಸಭಾ ಸದಸ್ಯರು ಗಿರೀಶ್ ಮೇಲೆ ಮುಗಿಬಿದ್ದು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿತ್ತು. ಈ ಪ್ರಸಂಗ ಪ್ರಸ್ತುತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ‌ಯ ಮುಖಂಡರು ನಗರಸಭೆ ಸದಸ್ಯರ ನಡತೆಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದು, ಯಾರು ಯೋಗ್ಯರು? ಯಾರು ಅಯೋಗ್ಯರು? ಎಂದು ನಗಸಭಾ ಆಡಳಿತಕ್ಕೆ ಸುಮಾರು 40 ಪ್ರಶ್ನೆಗಳನ್ನು ಕೇಳಿದ್ದಾರೆ.

ನಾಗರಕೆರೆಯಲ್ಲಿನ ನೀರು ಕಲುಷಿತಗೊಳ್ಳುತ್ತಿದ್ದು, ಒಳಚರಂಡಿ ನೀರು ಸೂಕ್ತ ರೀತಿಯಲ್ಲಿ ಶುದ್ದೀಕರಿಸದೆ ಬಿಡುತ್ತಿರುವ ಬಗ್ಗೆ ಚನ್ನೈ ಹಸಿರು ನ್ಯಾಯಮಂಡಳಿಗೆ ಗಿರೀಶ್ ಅವರು ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದಾರೆ. ನಗರದ ಸ್ವಚ್ಛತೆ ಹಾಗೂ ಒಳಚರಂಡಿ ತ್ಯಾಜ್ಯ ನೀರಿನ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿರುವ ಮಾಹಿತಿಗೆ ಅಧಿಕಾರಿಗಳು ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ. ಇದಕ್ಕೆ ಕುಪಿತಗೊಂಡ ಗಿರೀಶ್ ಕುಂದು ಕೊರತೆ ಸಭೆಯಲ್ಲಿ ‘ಅಯೋಗ್ಯರು’ ಶಬ್ಧ ಬಳಕೆ ಮಾಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಗಿರೀಶ್ ಅವರ ಮಾತನ್ನು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರು ಸರ್ಮರ್ಥಿಸಿಕೊಂಡಿದ್ದಾರೆ.

ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ರೈತ ಮುಖಂಡ ವಸಂತ್ ಕುಮಾರ್, ನಗರದಲ್ಲಿರುವ ಸಮಸ್ಯೆ ಬಗೆಹರಿಸದವರು ಅಯೋಗ್ಯರಷ್ಟೇ ಅಲ್ಲ ಮುಠಾಳರು ಎಂದು ಕರೆದರೆ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಅರ್ಕಾವತಿ ನದಿಪಾತ್ರದ ಕೆರೆಗಳು ಕಲುಷಿತಗೊಂಡು ಜಲಚರ, ಪ್ರಾಣಿ ಪಕ್ಷಿಗಳ ಮಾರಣಹೋಮವಾಗುತ್ತಿವೆ. ಕೆರೆ ಕಲುಷಿತಗೊಳ್ಳುತ್ತಿರುವುದನ್ನ ತಡೆಯಲು ಹಾಗೂ ಕಲುಷಿತಗೊಂಡಿರುವ ಕೆರೆಗಳನ್ನ ಶುದ್ಧೀಕರಣ ಮಾಡಲು ಯಾರಿಗೂ ಯೋಗ್ಯತೆ ಇಲ್ಲ. ನಮ್ಮ ಮೂಲಭೂತ ಹಕ್ಕಾದ ಕುಡಿಯುವ ನೀರನ್ನು ಪಡೆಯಲು ನಮ್ಮ ದಿನ ನಿತ್ಯದ ಕೆಲಸಗಳನ್ನು ಬಿಟ್ಟು ಹೋರಾಟ, ಧರಣಿ, ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ಸತೀಶ್ ಮಾತನಾಡಿ , ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಆಯೋಗ್ಯ ಪದ ಬಳಸಿದ ಗಿರೀಶ್ ಮೇಲೆ ನಗರಸಭೆಯ ಕೆಲವು ಸದಸ್ಯರು ಗೂಂಡಾವರ್ತನೆ ತೋರಿದ್ದಾರೆ. ಗಿರೀಶ್ ಅವರು ನಗರಸಭೆ ಅಧಿಕಾರಿಗಳು, ಸದಸ್ಯರ ಬೇಜವಾಬ್ದಾರಿತನಕ್ಕೆ ಬೇಸತ್ತು ಅಯೋಗ್ಯ ಪದ ಬಳಕೆ ಮಾಡಿದ್ದಾರೆ ಅದರಲ್ಲಿ ತಪ್ಪೇನಿದೆ? ಅವ್ಯವಸ್ಥೆಗಳ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಏಕಾಏಕಿ ಮುಗಿಬಿದ್ದು ಗಲಾಟೆ ಮಾಡುವುದು ಎಷ್ಟು ಸರಿ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡಿದವರ ಮೇಲೆ ಈ ರೀತಿ ದಬ್ಬಾಳಿಕೆ, ಗೂಂಡಾ ವರ್ತನೆ ಮಾಡಿರುವುದು ಖಂಡನೀಯ ಇದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಿರೀಶ್ ಮೇಲೆ ಗೂಂಡಾವರ್ತನೆ ಮಾಡಿದವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಳೇಗೌಡ, ವಿಜಯಕುಮಾರ, ರಮೇಶ್ ಉಪಸ್ಥಿತರಿದ್ದರು.