ಸಮಾಜ ಸೇವೆಯಲ್ಲಿ ತೊಡಗಿರುವ ಸ್ವಯಂ ಸೇವಕರ ಸಾಮಾಜಿಕ ಭದ್ರತೆಗಾಗಿ ಸಮಾವೇಶ..!

ದೊಡ್ಡಬಳ್ಳಾಪುರ:ದೇಶದ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಕೊಡುಗೆ ಅಪಾರವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಸ್ವಯಂ ಸೇವಾ ಸಂಸ್ಥೆಗಳು ಲಕ್ಷಾಂತರ ಸಿಬ್ಬಂದಿ/ಕಾರ್ಯಕರ್ತರು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಸ್ವಯ ಸೇವಕರಿಗೆ ಸಾಮಾಜಿಕ ಭದ್ರತೆ ಇಲ್ಲವಾಗಿದೆ, ಸರ್ಕಾರ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಒತ್ತಡ ಹೇರಲು ಸ್ವಯಂ ಸೇವಾ ಸಂಘಗಳ ಕಾರ್ಯಕರ್ತರ ಸಮಾವೇಶ ನಡೆಸಲು ನಿರ್ದರಿಸಿದ್ದೇವೆ ಎಂದು ಫೆವಾರ್ಡ್-ಕ ಸಂಘಟನೆಯ ಖಜಾಂಚಿ ಅಮಲ ಗೋಪಾಲ ನಾಯ್ಕ್ ತಿಳಿಸಿದರು.

ನಗರದ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯಲ್ಲಿ ಫೆವಾರ್ಡ್-ಕ ಸಂಘಟನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರು ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಸಂಚಕಾರ ಬಂದಾಗ ಬೀದಿಗಿಳಿದು ಹೋರಾಟ ಮಾಡುತ್ತಾರೆ.

ಭಾರತದ ಯಾವುದೇ ಮೂಲೆಯಲ್ಲಿ ನೈಸರ್ಗಿಕ ವಿಪತ್ತುಗಳಾದಾಗ ಪರಿಹಾರ ಕಾರ್ಯಕ್ರಮಗಳ ಮುಖಾಂತರ ಕೋಟ್ಯಾನುಕೋಟಿ ರೂಪಾಯಿ ಹಣ ಮತ್ತು ದವಸ-ದಾನ್ಯ ಸಂಗ್ರಹಿಸಿ ಪರಿಹಾರ ನಿಧಿಗಳಿಗೆ ದೇಣಿಗೆ ನೀಡುವುದರ ಜೊತೆಗೆ ಖುದ್ದು ಮುಂದೆ ನಿಂತು ಕಾರ್ಯನಿರ್ವಹಿಸುತ್ತಾರೆ.

ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಸ್ವಯಂ ಸೇವಾ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಇಲ್ಲ ಎಂದು ತಮ್ಮ ಅಸಮಧಾನ ಹೊರ ಹಾಕಿದರು.

ಸಂಘಟನೆಯ ಮತ್ತೊಬ್ಬ ಮುಖಂಡ ಫಾದರ್ ಎಡ್ವರ್ಡ್ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲತ್ತುಗಳನ್ನು ತಲುಪಿಸುವುದರಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿ ಕಾರ್ಯಕರ್ತರು ಹಗಲಿರಳು ಕಾರ್ಯ ನಿರ್ವಹಿಸುತ್ತಿರುವುದನ್ನು ಕೇಂದ್ರ ಸರ್ಕಾರ ಗಮನಿಸಿ ಭಾರತದ ಸಂವಿಧಾನದ ಐದನೇ ಅಂಗವಾಗಿ ಸ್ವಯಂ ಸೇವಾ ಕ್ಷೇತ್ರವನ್ನುಗುತಿಸಿದೆ. ಈ ದಿಸೆಯಲ್ಲಿ ಕರ್ನಾಟಕದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸುಸ್ಥಿರ ಬಲವರ್ಧನೆಗೆ “ಕರ್ನಾಟಕ ನಗರ ಮತ್ತು ಗ್ರಾಮಾಭ್ಯುಧ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ-ಫೆವಾರ್ಡ್- 1984 ರಿಂದ ಕಾರ್ಯ ನಿರ್ವಹಿಸುತ್ತಿದೆ. ಧ್ವನಿ ಇಲ್ಲದವರ ಮತ್ತು ಅವಕಾಶ ವಂಚಿತರಾಗಿ ಅಂಚಿನಲ್ಲಿರುವ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರದ ಪರವಾಗಿ ಸೇವಾ ಮನೋಭಾವದಿಂದ ಕನಿಷ್ಠ ವೇತನವಿಲ್ಲದೆ ಕರ್ತವ್ಯದಲ್ಲಿ ನಿರತರಾಗಿರುವುದು ಸಮಾಜದಲ್ಲಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ರಾಜ್ಯದಲ್ಲಿ ಸರಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರುಗಳು ವಿವಿಧ ಕಾರ್ಯಕ್ರಮಗಳ ಯೋಜನಾ ಕ್ಷೇತ್ರದಲ್ಲಿ ಹಗಲಿರಳು ದುಡಿಯುತ್ತಿರುವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಯಾವುದೇ ಸಾಮಾಜಿಕ ಭದ್ರತೆ ಇಲ್ಲದಿರುವುದನ್ನು ಸರ್ಕಾರದ ಗಮನಕ್ಕೆ ತರಲು ಸಮಾವೇಶ ಒಂದು ಸಣ್ಣ ಪ್ರಯತ್ನವಾಗಿದೆ ಎಂದರು.

ಸಂಘಟನೆಯ ಕಾರ್ಯದರ್ಶಿ ನಾಗರಾಜು ಮಾತನಾಡಿ,
ಸಾಮಾಜಿಕ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ/ಕಾರ್ಯಕರ್ತರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲದ ಕಾರಣ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ರೂಪಿಸಿರುವ ಸರ್ಕಾರಿ ಯೋಜನೆಗಳಲ್ಲಿ ಕಡಿಮೆ ವೇತನ/ಸಂಭಾವನೆ ಹಾಗೂ ಕನಿಷ್ಕ ವೇತನ ಸಿಗದ ಕಾರಣ ಆರ್ಥಿಕವಾಗಿ ಹಿಂದುಳಿದಿರುವ ಕಾರ್ಯಕರ್ತರ ಕುಟುಂಬಗಳ ಪೋಷಣೆ ತೃಪ್ತಿಕರವಾಗಿಲ್ಲ ಮತ್ತು ಹಲವು ಸಂದರ್ಭಗಳಲ್ಲಿ ಕರ್ತವ್ಯದಲ್ಲಿರುವಾಗ ಸಿಬ್ಬಂದಿ ಕಾರ್ಯಕರ್ತರು ಸಾವನ್ನಪ್ಪಿ ಅವರ ಕುಟುಂಬಗಳು ಬೀದಿ ಪಾಲಾಗಿರುವ ಉದಾರಣೆಗಳು ಸಾಕಷ್ಟಿವೆ. ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವರಿಗೆ ಯಾವುದೇ ಸಾಮಾಜಿಕ ಭದ್ರತೆಯನ್ನು ಸರ್ಕಾರದಿಂದ ಕಲ್ಪಿಸಿಲ್ಲ.

ಕೋವಿಡ್, ಪ್ರವಾಹಗಳು ಏರ್ಪಟ್ಟಾಗ ಮುಂಚೂಣಿ ಕಾರ್ಯಕರ್ತರಾಗಿ ದುಡಿದ ಅದೆಷ್ಟೋ ಸಾಮಾಜಿಕ ಕ್ಷೇತ್ರದ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ, ಅವರ ಕುಟುಂಬ ಕಷ್ಟದಲ್ಲಿ ಜೀವನ ನಡೆಸುತ್ತಿದೆ. ಆದುದರಿಂದ, ಕರ್ನಾಟಕದಲ್ಲಿ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ/ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಕಲ್ಪಿಸಿಕೊಡಲು ಸರ್ಕಾರದ ಮೇಲೆ ಒತ್ತಡ ಏರಲು ಕರ್ನಾಟಕದಲ್ಲಿ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ/ಕಾರ್ಯಕರ್ತರಗಳನ್ನು ಒಂದುಗೂಡಿಸಿ, ರಾಜ್ಯ ಮಟ್ಟದಲ್ಲಿ ಸಮಾವೇಶ ಆಯೋಜಿಸಿ ಮಾನ್ಯ ಮುಖ್ಯಮಂತ್ರಿಗಳು ವಿವಿದ ಇಲಾಖೆಯ ಸಚಿವರನ್ನು ಸಮಾವೇಶಕ್ಕೆ ಆಹ್ವಾನಿಸಿ ಸಾಮಾಜಿಕ ಕಾರ್ಯಕರ್ತರ ಬೇಡಿಕೆಗಳನ್ನು ಹೀಡೇರಿಸಲು ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.

ಕರ್ನಾಟಕದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಕಾರ್ಯಕರ್ತರುಗಳಿಗೆ ಸಾಮಾಜಿಕ ನ್ಯಾಯಾ ದೊರಕಿಸಿ ಕೊಡಲು ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದ್ಯ ಸ್ವಯಂ
ಸೇವಾ ಸಂಸ್ಥೆಗಳ ಒಕ್ಕೂಟ – ಫೆವಾರ್ಡ್-ಕ ನಿರ್ಧರಿಸಿದೆ”. ಹಾಗಾಗಿ ದಿನಾಂಕ:20-10-2023 ರ ಒಳಗಾಗಿ ಸ್ವಯಂ ಸೇವಾ ಕ್ಷೇತ್ರದ ಕಾರ್ಯಕರ್ತರು/ಸಿಬ್ಬಂದಿಗಳು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಫೆವಾರ್ಡ್-ಕ ಸಂಘಟನೆಯ ಸಂಸ್ಥಾಪಕ ಗೋಪಾಲ ನಾಯ್ಕ್, ರಾಮು ಜೋಗಿಹಳ್ಳಿ, ಲಿಲ್ಲಿ ಸಾಂಜೆ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.