ದೊಡ್ಡಬಳ್ಳಾಪುರ:ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ಉದ್ಯಮದ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ಗುರಿ ಇಟ್ಟುಕೊಂಡಿರುವ ಸಲಹಾ ಮಂಡಳಿಯ ಸಮಾವೇಶ ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನಡೆಯಿತು.
ನಾವೀನ್ಯತೆಯನ್ನು ಬೆಳೆಸಿ ಪೋಷಿಸುವುದು ಮತ್ತು ಗೀತಂನ ಎಂಜಿನಿಯರಿಂಗ್ ಪಠ್ಯಕ್ರಮದ ಪರಿಷ್ಕರಣೆಯಲ್ಲಿ ನೇರವಾಗಿ ಇಲ್ಲಿನ ವಿದ್ಯಾರ್ಥಿಗಳನ್ನು ಹೆಚ್ಚೆಚ್ಚು ಉದ್ಯಮಕ್ಕೆ ಸಿದ್ಧವಾಗಿಸುವ ಕುರಿತು ವಿಚಾರ ಮಂಥನ ನಡೆಯಿತು.
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ದ ಸತೀಶ್ ಧವನ್ ಪ್ರೊ. ಡಾ.ಉಮಾಮಹೇಶ್ವರನ್ ಮಾತನಾಡಿ, ಭಾರತದ ಬಾಹ್ಯಾಕಾಶ ಸಂಸ್ಥೆಯ ಉತ್ಕೃಷ್ಟ ಕರ್ತವ್ಯ ನಿರ್ವಹಣೆ, ಸಂಶೋಧನೆ, ಬದ್ಧತೆಯ ಪರಿಣಾಮ ಚಂದ್ರಯಾನ-3, ಅದಿತ್ಯ-ಎಲ್ ಮತ್ತು ಗಗನಯಾನ ಅತ್ಯುತ್ತಮವಾಗಿ ಸಾಗಿರುವ ಬಗ್ಗೆ ವಿವರ ನೀಡಿದರು. ಆಧುನಿಕ ಸಂವಹನ, ನ್ಯಾವಿಗೇಶನ್, ಬಾಹ್ಯಾಕಾಶ ಮತ್ತು ವಿಪತ್ತು ನಿರ್ವಹಣೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಹಲವಾರು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ಪ್ರಮುಖವಾಗಿ ಮಾಹಿತಿ ನೀಡಿದರು.
ಇಸ್ರೋದ ಪ್ರತಿಯೊಬ್ಬರೂ ಹಗಲಿರುಳು ಶ್ರಮಿಸುತ್ತಿರುವುದರಿಂದ ಯಶಸ್ಸು ಸಾಧ್ಯವಾಯಿತು. ಇದೇ ರೀತಿಯ ಗುಣ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಸ್ರೋ ಯಶಸ್ವಿಗೆ ಏನು ಮಾಡಲಾಗುತ್ತಿದೆ ಎಂದು ಜನರು ಕೇಳುತ್ತಾರೆ, ದೂರದೃಷ್ಟಿಯ ನಾಯಕರನ್ನು ಹೊಂದಿರುವುದಕ್ಕೆ ನಾವು ತುಂಬಾ ಅದೃಷ್ಟವಂತರಾಗಿದ್ದೇವೆ. ಇಸ್ರೋ ಸಂಸ್ಥೆಯ ವಿಶಿಷ್ಟವಾದ ಲಕ್ಷಣವೆಂದರೆ ಅದರ ಮುಕ್ತತೆ ಮತ್ತು ಪಾರದರ್ಶಕತೆಯಾಗಿದೆ. ನಿರ್ಧಾರ ಸಾಮೂಹಿಕವಾಗಿದ್ದರೂ ಯಾರೂ ಅದನ್ನು ನಿರುತ್ಸಾಹ ಮಾಡುವುದಿಲ್ಲ ಅಂತಿಮವಾಗಿ ನಿಮ್ಮ ಕೆಲಸಕ್ಕೆ ಆಳವಾದ ಉತ್ಸಾಹ ಮತ್ತು ಸಂಪೂರ್ಣ ಬದ್ಧತೆ ನಿರ್ಣಾಯಕವಾಗಿರುತ್ತದೆ ಎಂದು ಹೇಳಿದರು.
ಹೊರಹೊಮ್ಮುತ್ತಿರುವ ಉದ್ಯಮ, ಬ್ರೆಂಡ್ ಗಳು, ಉದ್ಯಮಗಳ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ, ಪ್ರತಿಭೆಗಳ ಸವಾಲುಗಳನ್ನು ಎದುರಿಸುವುದು ಮತ್ತು ಬ್ರಹೋಸ್ ಕ್ಷಿಪಣಿ ಕಾರ್ಯಕ್ರಮದ ಯಶೋಗಾಥೆ ಸೇರಿದಂತೆ ಹಲವಾರು ವಿಷಯ ಮತ್ತು ಚರ್ಚೆಗಳಿಗೆ ಈ ಸಮಾವೇಶ ವೇದಿಕೆ ಒದಗಿಸಿಕೊಟ್ಟಿತು.
ಸೆಂಟಂ ಎಲೆಕ್ಟ್ರಾನಿಕ್ಸ್ ನ ಉಪಾಧ್ಯಕ್ಷ ವಿಶ್ವನಾಥ್ ಎಂ.ಎಸ್, ಹನಿವೆಲ್ ನಿರ್ದೇಶಕ ರವಿಶಂಕರ್ ಆರ್, ಇನ್ಫೋಸಿಸ್ ಉಪಾಧ್ಯಕ್ಷ ಡಾ.ರವಿಕುಮಾರ್ ಜಿವಿವಿ, ಎಲ್ & ಟಿ ಟೆಕ್ ಸರ್ವೀಸಸ್ ನ ಬಿ.ಯು ಮುಖ್ಯಸ್ಥ ಕಮಲೇಶ್ ಖಂಗಾನಿ, ಬಾಷ್ ಹಿರಿಯ ಉಪಾಧ್ಯಕ್ಷ ಆರ್.ಕೆ.ಶೆಣೈ, ಕೊಲಿನ್ಸ್ ಏರೋಸ್ಪೇಸ್ ನ ತಂತ್ರಜ್ಞಾನ ನಿರ್ದೇಶಕ ಆದಿಶೇಷ, ಎಚ್ ಸಿಎಲ್ ಟೆಕ್ ನ ಮುಖ್ಯ ಉಪಾಧ್ಯಕ್ಷರಾದ ಶಿವಶಂಕರ್ ಮತ್ತು ಎಡಬ್ಲ್ಯೂಎಸ್ ನ ಜಾಗತಿಕ ಮುಖ್ಯಸ್ಥ ಕೊಟ್ಟಾಯ್ ಸೇರಿದಂತೆ ಇನ್ನೂ ಹಲವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಪರಿಣಿತರ ಸಮೂಹವು ಸಮಾವೇಶದಲ್ಲಿ ಪಾಲ್ಗೊಂಡು ಮೆರಗು ತಂದಿತು.
ಬೆಂಗಳೂರಿನ ಗೀತಂ ವಿ.ವಿ.ಯ ಉಪಕುಲಪತಿ ಪ್ರೊ.ಕೆ.ಎನ್.ಎಸ್. ಆಚಾರ್ಯ ಮಾತನಾಡಿ, ಭಾರತವು ಅತಿದೊಡ್ಡ ಅವಕಾಶದ ಮೇಲೆ ಕುಳಿತಿದೆ. ಮುಂದಿನ 5-6 ವರ್ಷಗಳಲ್ಲಿ ಭಾರತವು 7 ಟ್ರಿಲಿಯನ್ ಡಾಲರ್ ನ ಆರ್ಥಿಕತೆಯನ್ನು ಹೊಂದುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ವ್ಯಾಪಾರಗಳು ಖಚಿತವಾದರೆ ನಾವು ಸೂಕ್ತವಾದ ಪ್ರತಿಭೆಗಳನ್ನು ನೀಡಲು ಸಿದ್ಧರಿದ್ದೇವೆಯೇ? ನಮ್ಮ ಎಂಜಿನಿಯರಿಂಗ್ ಪಠ್ಯಕ್ರಮದ ಪರಿಷ್ಕರಣೆ ವಿಚಾರದಲ್ಲಿ 25ಕ್ಕೂ ಹೆಚ್ಚು ಕಂಪನಿಗಳ ನಾಯಕರು ಮಾರ್ಗದರ್ಶನ ಮಾಡಿದ್ದರಿಂದ ಗೀತಂ ಅಭಾರಿಯಾಗಿದೆ. ನಾವು ಉದ್ಯಮ ಸಲಹಾ ಮಂಡಳಿಯೊಂದಿಗೆ ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಮಂಡಳಿಯು ನೀಡುವ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಇದರ ಆಧಾರದಲ್ಲಿ ನಾವು ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಶೈಕ್ಷಣಿಕ ಪಠ್ಯಕ್ರಮ ಅಳವಡಿಸುತ್ತೇವೆ ಎಂದರು.
ಗೀತಂ’ ವಿ.ವಿ.ಯ ಚಾನ್ಸಲರ್ ವೀರೇಂದರ್ ಸಿಂಗ್ ಚೌಹಾಣ್ ಮಾತನಾಡಿ, “ವಿಶ್ವವಿದ್ಯಾಲಯದಲ್ಲಿ ಪಡೆಯುತ್ತಿರುವ ಶಿಕ್ಷಣ – ಕೌಶಲ್ಯಭರಿತವಾಗಿಲ್ಲ. ವಿಶ್ವವಿದ್ಯಾಲಯಕ್ಕೆ ಉದ್ಯಮವು ಸಾರ್ವತ್ರಿಕವಾಗಿ ಅತ್ಯಂತ ಮುಖ್ಯವಾಗಿರುತ್ತದೆ. ಅದಕ್ಕೆ ಪ್ರತಿಯಾಗಿ ಶಿಕ್ಷಣದ ಮೂಲ ಮೌಲ್ಯವು ಎಲ್ಲಿ ಉಳಿಯಬೇಕೋ ಅಲ್ಲಿ ಉಳಿಯುತ್ತದೆ. ಕೌಶಲ್ಯಗಳನ್ನು ಯುವಜನರಿಗೆ ಮನದಟ್ಟು ಮಾಡುವ ಅಗತ್ಯವಿಲ್ಲ. ಅಮೆರಿಕಾದಲ್ಲಿ ಮೂರನೇ ಒಂದು ಭಾಗದಷ್ಟು ಜನರು ಮಾತ್ರ ಲಸಿಕೆಗಳನ್ನು ಹಾಕಿಸಿಕೊಂಡಿದ್ದರು. ಏಕೆಂದರೆ, ಅವರು ಲಸಿಕೆಗಳನ್ನು ನಂಬಲಿಲ್ಲ. ಉತ್ತಮ ವಿಶ್ವವಿದ್ಯಾಲಯದಲ್ಲಿ ಕೌಶಲ್ಯ ಅನಿವಾರ್ಯವಾಗಿದೆ. ಅದರ ಪದವೀಧರರು ಕೇವಲ ನುರಿತರಷ್ಟೇ ಅಲ್ಲ ವಿದ್ಯಾವಂತರಾಗಿ ಹೊರ ಹೋಗುವಂತೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ವಿಶ್ವವಿದ್ಯಾಲಯದ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.
ತಂತ್ರಜ್ಞಾನ ಪರಿಣಿತರು ಮತ್ತು ಶಿಕ್ಷಣ ತಜ್ಞರ ಸಮೂಹವು ಎಂಜಿನಿಯರಿಂಗ್ ಶಿಕ್ಷಣದ ಅಭಿವೃದ್ಧಿಯಲ್ಲಿ ಗಮನಾರ್ಹವಾದ ಪಾತ್ರವನ್ನು ವಹಿಸುತ್ತದೆ. ಇದು ನವೋದ್ಯಮಕ್ಕೆ ಚಾಲನೆ ನೀಡುವ ಮತ್ತು ಭಾರತದ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುವ ಉದ್ಯಮ ಸಿದ್ಧ ಪದವೀಧರರನ್ನು ಸೃಷ್ಟಿಸುವ ಬದ್ಧತೆಯನ್ನು ಸಮಾವೇಶ ಒತ್ತಿ ಹೇಳಿತು.