ದೊಡ್ಡಬಳ್ಳಾಪುರ: ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಗೂಡಂಗಡಿಗಳನ್ನು ಏಕಾಏಕಿ ತೆರವು ಮಾಡಿದ ನಗರಸಭೆ ವಿರುದ್ಧ ಬೀದಿ ಬದಿ ವ್ಯಾಪಾರಿಗಳು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ಬೀದಿಬದಿ ವ್ಯಾಪಾರಿಗಳು ಮುಂದಿನ ಹೋರಾಟದ ರೂಪುರೇಷಗಳ ಕುರಿತು ಚರ್ಚಿಸಿದರು.

ಶುಕ್ರವಾರ ಬೆಳಿಗ್ಗೆ ಬೃಹತ್ ಜಾಥಾ ಮೂಲಕ ನಗರಸಭೆ ಕಚೇರಿಗೆ ತೆರಳಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ನಗರಸಭೆ ಅಧಿಕಾರಿಗಳ ದಬ್ಬಾಳಿಕೆ ನಡೆಸಿ ಅಂಗಡಿಗಳನ್ನು ತೆರವು ಮಾಡಿದ್ದಾರೆ. ತೆರವಿಗೂ ಮುನ್ನ ಕಾಲಾವಕಾಶ ನೀಡಿದ್ದರೆ ನಾವೇ ತೆರವು ಮಾಡಿಕೊಳ್ಳುತ್ತಿದ್ದೆವು. ಯಾವುದೇ ಸೂಚನೆ ನೀಡದೇ ಜೀವನಾಧಾರವಾಗಿದ್ದ ಅಂಗಡಿಗಳನ್ನು ತೆರವು ಮಾಡಿದ್ದಾರೆ. ಬಡವರ ಅಂಗಡಿಗಳನ್ನು ತೆರವು ಮಾಡಿ, ಪ್ರಭಾವಿಗಳ ಅಂಗಡಿಗಳನ್ನು ಮುಟ್ಟಿಲ್ಲ. ಇದು ನಗರಸಭೆ ಅಧಿಕಾರಿಗಳ ಪಕ್ಷಪಾತ ಧೋರಣೆಗೆ ಸಾಕ್ಷಿಯಾಗಿದೆ ಎಂದು ವ್ಯಾಪಾರಿಗಳು ಆರೋಪಿಸಿದರು.

ಟೀ, ಬೀಡಿ ಸಿಗರೇಟ್ ಮಾರಾಟ ಮಾಡಿಯೇ ಜೀವನ ಸಾಗಿಸುತ್ತಿದ್ದ ನಮ್ಮ ಬದುಕಿಗೆ ನಗರಸಭೆ ಬರೆ ಎಳೆದಿದೆ. ಬೀದಿ ಬದಿ ವ್ಯಾಪಾರ ಮಾಡಿ ಸಂಸಾರ ಸರಿದೂಗಿಸುತ್ತಿದ್ದೇವೆ. ಏಕಾಏಕಿ ಅಂಗಡಿ ತೆರವು ಮಾಡಿದ್ದಾರೆ. ಈಗ ನಮ್ಮ ಜೀವನ ಹೇಗೆ, ಪರ್ಯಾಯ ಜಾಗ ನೀಡಿ ತೆರವಿಗೆ ಕಾಲಾವಕಾಶ ನೀಡಿದ್ದರೆ ಎಲ್ಲರಿಗೂ ಅನುಕುಲವಾಗುತ್ತಿತ್ತು. ಬಡವರ ಮೇಲೆ ಅಧಿಕಾರಿಗಳು ಇಷ್ಟೆಲ್ಲಾ ದೌರ್ಜನ್ಯ ದಬ್ಬಾಳಿಕೆ ನಡೆಸಿದರೂ ಸ್ಥಳೀಯ ಶಾಸಕರು ಸ್ಪಂದಿಸಿಲ್ಲ ಎಂದು ದೂರಿದರು.

ಹಲವು ಖಾಸಗಿ ಫೈನಾನ್ಸ್‌ನವರಿಂದ
ದಿನವಹಿ ಸಾಲ ಪಡೆದಿದ್ದೆವು. ಈಗ ಅಂಗಡಿ ಇಲ್ಲ ಬದುಕು ನಡೆಸುವುದೇ ಕಷ್ಟವಾಗಿರುವಾಗ ಸಾಲ ತೀರಿಸಿವುದು ಅಸಾಧ್ಯ ಆತ್ಮಹತ್ಯೆಯೊಂದೇ ಉಳಿದಿರುವ ದಾರಿ ಎಂದು ಮತ್ತೊಬ್ಬ ಮಹಿಳೆ ಹೇಳಿದರು.