ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪ (ಕೋರ್ಟ್‌ ರಸ್ತೆಯ ತಿರುವು ನೂತನವಾಗಿ ತಲೆಎತ್ತಿರುವ ಖಾಸಗಿ ಆಸ್ಪತ್ರೆಯ ಹೆಸರನ್ನು ಆಂಗ್ಲ ಭಾಷೆಯನ್ನು ವಿಜೃಂಭಿಸಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಪುರುಷೋತ್ತಮ ಗೌಡ ಆರೋಪಿಸಿದ್ದಾರೆ.

ಸೆವೆನ್ ಹಿಲ್ಸ್ ಹೆಸರಿನ ಆಸ್ಪತ್ರೆಯು ದೊಡ್ಡ ಅಕ್ಷರಗಳಲ್ಲಿ ಎಲ್ಲೆಡೆ ಆಂಗ್ಲ ಭಾಷೆಯಲ್ಲಿ ಹೆಸರು ಹಾಕಿದೆ. ನಗರಸಭೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಮಾರ್ವಾಡಿಗಳು ಸೇರಿದಂತೆ ಹಲವರು ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹೋರಾಟ ರೂಪಿಸಲಿದೆ. ಆಸ್ಪತ್ರೆ ಆರಂಭದ ಹೊತ್ತಿಗೆ ಕನ್ನಡ ಹೆಸರು ಹಾಕದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆಸ್ಪತ್ರೆಯ ಮುಂದೆ ಜಮಾಯಿಸಿದ ಕಾರ್ಯಕರ್ತರು ಮಾಲೀಕರೊಂದಿಗೆ ವಾಗ್ವಾದ ನಡೆಸಿದರು. ಕನ್ನಡ ಭಾಷೆ ಬಳಸದಿರುವುದಕ್ಕೆ ಕ್ಷಮೆಯಾಚಿಸಿದ ಮಾಲೀಕರು, ಕೂಡಲೇ ಕನ್ನಡದಲ್ಲಿ ಆಸ್ಪತ್ರೆ ಹೆಸರು ಬರೆಸುವುದಾಗಿ ಭರವಸೆ ನೀಡಿದರು.

ಅಂತೆಯೇ ದೊಡ್ಡ ಗಾತ್ರದಲ್ಲಿ ಬರೆದಿದ್ದ ಆಂಗ್ಲ ಅಕ್ಷರಗಳನ್ನು ಬಿಳಿ ಬಟ್ಟೆಯಿಂದ ಮುಚ್ಚಿದರು.ಅಸ್ಪತ್ರೆ ಉದ್ಘಾಟನೆ ನೆರವೇರಿಸುವ ವೇಳೆಯೊಳಗೆ ಕನ್ನಡದಲ್ಲಿ ಆಸ್ಪತ್ರೆ ಹೆಸರು ಬರೆಸಲಾಗುವುದು ಎಂದು ಹೇಳಿದರು.