ಗದ್ದರ್ ನುಡಿ ನಮನ
ಕೆಚ್ಛೆದೆಯ ಹೋರಾಟಗಾರರ ಅವಶ್ಯಕತೆ ಇದೆ….. ಪತ್ರಕರ್ತ ವೆಂಕಟೇಶ್

ದೊಡ್ಡಬಳ್ಳಾಪುರ!!… ಪ್ರಸ್ತುತ ಅವ್ಯವಸ್ಥೆ ಹಾಗೂ ಪ್ರಭುತ್ವದ ದುರಾಡಳಿತದ ವಿರುದ್ಧ ಸಿಡಿದೇಳುವಂತ ಪ್ರಾಮಾಣಿಕ, ಪ್ರಬಲ ಹೋರಾಟ ರೂಪಿಸುವ ನಾಯಕರಿಲ್ಲದಿರುವುದು ವಿಷಾದದ ಸಂಗತಿ ಎಂದು ಪತ್ರಕರ್ತ ಹಾಗೂ ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಕೆ. ವೆಂಕಟೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಜಾಗೃತ ಪರಿಷತ್, ದಲಿತಪರ ಹಾಗೂ ಕನ್ನಡ ಸಂಘಟನೆಗಳ ವತಿಯಿಂದ ಕನ್ನಡ ಜಾಗೃತ ಪರಿಷತ್ ನಲ್ಲಿ ಬುದುವಾರ ಸಂಜೆ ನಡೆದ ಗದ್ದರ್ ನುಡಿನಮನ ಕಾರ್ಯಕ್ರಮದಲ್ಲಿ ವೆಂಕಟೇಶ್ ಮಾತನಾಡಿ ಗದ್ದರ್ ಒಬ್ಬ ಕ್ರಾಂತಿಕಾರಿ ಹಾಗೂ ಕವಿ ಜೊತೆಗೆ ಸೈದ್ದಂತಿಕ ವಾದ ಹೋರಾಟಗಾರ. ಶೋಷಿತ, ದಮನಿತರ ಪರವಾಗಿ ನಿರಂತರ ಹೋರಾಟ ಮಾಡಿದವರು. ಆಸರೆ ಇಲ್ಲದಂತ ಸಮುದಾಯಗಳ ಪರವಾಗಿ ನಿಲ್ಲುವಂತ ಗದ್ದರ್ ತರಹದ ಹೋರಾಟಗಾರರು ಯಾರು ಇಲ್ಲವಾಗಿದ್ದರೆ. ಇದು ನಮ್ಮ ದುರಂತ. ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಮಾಡಿದ ಹೋರಾಟದ ಪರಿಣಾಮ ತೆಲಂಗಾಣ ಉದಯವಾಯಿತು. ದುರಂತವೆಂದರೆ ಗದ್ದರ್ ರವರ ಆಶಯದಂತೆ ಶೋಷಿತರು ಅಧಿಕಾರಕ್ಕೆ ಬರಲೇ ಇಲ್ಲಾ. ಬದಲಾಗಿ ಪ್ರಬಲ ಜಾತಿ ವಕ್ತಾರರಂತೆ ವರ್ತಿಸುವವರು ಅಧಿಕಾರ ಹಿಡದರು. ನಮಗೆ ಹಕ್ಕುಗಳು ಹಾಗೂ ಪ್ರಜ್ಞೆಗಳು ಇಲ್ಲ. ಗದ್ದರ್ ಅಂತವರಿಗೆ ಗೌರವ ಸಲ್ಲಿಸಬೇಕಾದರೆ ಅವರ ಗಟ್ಟಿತನದ ಹೋರಾಟ ಹಾಗು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಮ್ಯುನಿಸ್ಟ್ ಮುಖಂಡ ಚಂದ್ರು ತೇಜಸ್ವಿ ಮಾತನಾಡಿ ಗದ್ದರ್ ಒಬ್ಬ ನಕ್ಸಲ್ ಹೋರಾಟಗಾರ. ಅವರು ಕಮ್ಯುನಿಸ್ಟ್ ಸಿದ್ಧಾಂತವನ್ನು ಒಪ್ಪದಿದ್ದರೂ ಅದರ ಅಡಿಯಲ್ಲೇ ಹೋರಾಟ ಮಾಡಿದರು. ಅವರಂತ ಕ್ರಾಂತಿಕಾರಿ, ಪ್ರಗತಿಪರ, ಶೋಷಿತರ ಬಗ್ಗೆ ದ್ವನಿ ಎತ್ತುವಂತ ನಾಯಕ ಇನ್ನೊಬ್ಬನಿಲ್ಲ. ಗದ್ದರ್ ಭೌತಿಕವಾಗಿ ನಮ್ಮ ಜೊತೆಗಿಲ್ಲದಿರಬಹುದು, ಆದರೆ ಅವರ ಜಾನಪದ ಶೈಲಿ ಹಾಡುಗಳು, ಗಟ್ಟಿನಿಲುವಿನ ಹೋರಾಟಗಳು ನಮ್ಮ ಕಣ್ಣಮುಂದಿವೆ ಎಂದರು.
ಮಾನವ ಬಂಧುತ್ವದ ವೆಂಕಟೇಶ್, ಛಲವಾದಿ ಮಹಾಸಭಾದ ಅಧ್ಯಕ್ಷ ಗುರುರಾಜಪ್ಪ, ಗುಳ್ಯ ಹನುಮಣ್ಣ, ರಾಜಘಟ್ಟ ರವಿ ಮುಂತಾದವರು ಮಾತನಾಡಿ ಕೆಂಪು ಸೂರ್ಯ ನಮ್ಮನ್ನಗಲಿದರು ಅವರ ಆದರ್ಶಗಳು ಚಿರಾಸ್ತಾಯಿಯಾಗಿವೆ. ಆರ್ಥಿಕ, ಸಾಮಾಜಿಕ ವಾಗಿ ಮುಂದುವರೆದವರು ತುಳಿತಕ್ಕೆ ಒಳಗಾದವರಿಗೆ ಆಸರೆಯಾಗಬೇಕು. ಗದ್ದರ್ ರವರ ಕ್ರಾಂತಿಕಾರಿ ಹಾಡುಗಳು ಪ್ರತಿಯೊಬ್ಬರಲ್ಲಿಯೂ ಸಂಚಲನ ಮೂಡಿಸುತ್ತಿದ್ದವು. ರಯಡಿಕಲ್ ಸ್ಟೂಡೆಂಟ್ ವಿಂಗ್ ಮೂಲಕ ಗದ್ದರ್ ರವರು ಹೆಚ್ಚು ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಸರ್ಕಾರಗಳನ್ನು ನಡುಗಿಸಿ ಶೋಷಿತರ ದ್ವನಿಯಾಗಿ ದುಡಿದು ಎಲ್ಲರಿಗೂ ದಾರಿದೀಪವಾದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗರಾಜು ಶಿರವಾರ, ವಕೀಲರು ರುದ್ರರಾಧ್ಯ, ಆವಲ ಮೂರ್ತಿ, ಕನ್ನಡಜಾಗೃತ ಪರಿಷತ್ತಿನ ಪ್ರದಾನ ಕಾರ್ಯದರ್ಶಿ ಡಿ. ಪಿ ಆಂಜನೇಯ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.