ದೊಡ್ಡಬಳ್ಳಾಪುರ:ದಲಿತ ವಿಚಾರವಾದಿ ಹುಲಿಕುಂಟೆ ಮೂರ್ತಿ ಅವರ ಕುಟುಂಬಕ್ಕೆ ಅಂಗ ರಕ್ಷಕನನ್ನು ನೇಮಿಸಿ, ಅವರ ವೈಚಾರಿಕ ಹೇಳಿಕೆಯನ್ನು ಎಡಿಟ್ ಮಾಡಿ ಟ್ರೋಲ್ ಮಾಡಿ ಮಾನಸಿಕ ಕಿರುಕುಳ ನೀಡಿದ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಮತ್ತು ದಲಿತ ಪರ ಸಂಘಟನೆಗಳ ಮುಖಂಡರು ಒತ್ತಾಯಿದರು
ವಿಚಾರವಾದಿ ಹುಲಿಕುಂಟೆ ಮೂರ್ತಿ ವೈಚಾರಿಕ ಹೇಳಿಕೆಯನ್ನು ಬೆಂಬಲಿಸಿ, ವಿಜ್ಞಾನಿಗಳ ಮೌಢ್ಯವನ್ನು ವಿರೋಧಿಸಿ ಮತ್ತು ಟ್ರಾಲ್ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ನಗರದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು.
ಇತ್ತೀಚೆಗೆ ಉಪನ್ಯಾಸಕ ಹುಲಿಕುಂಟೆಮೂರ್ತಿ ಅವರು ಚಂದ್ರಯಾನ-3 ಉಪಗ್ರಹ ಉಡಾವಣೆ ಕುರಿತಂತೆ ವಿಜ್ಞಾನಿಗಳು ತಿರುಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದು ಅವೈಜ್ಞಾನಿಕವಾದುದು ಮತ್ತು ಯುವಜನರಲ್ಲಿ ಮೌಢ್ಯಾಚರಣೆಗೆ ಅವಕಾಶ ಮಾಡಿಕೊಡುತ್ತದೆ. ಜಾತ್ಯಾತೀತ, ಧರ್ಮನಿರಪೇಕ್ಷ ಪ್ರಜಾಪ್ರಭುತ್ವ ದೇಶದಲ್ಲಿ ಸರ್ಕಾರದ ಅಂಗ ಸಂಸ್ಥೆಯಾದ ಇಸ್ರೋ ಒಂದು ಧರ್ಮದ ಧಾರ್ಮಿಕತೆಗೆ ಅಂಟಿಕೊಂಡಿದ್ದು ತರವಲ್ಲ ಎಂಬ ಅರ್ಥದಲ್ಲಿ ತಮ್ಮ ಮುಖಪುಟದಲ್ಲಿ ಒಂದು ಪೋಸ್ಟ್ ಮಾಡಿದ್ದರು. ಕೆಲವು ಕಿಡಿಗೇಡಿಗಳು ಈ ಪೋಸ್ಟ್‌ನ ಕೆಲವು ತುಣುಕುಗಳನ್ನು ತೆಗೆದು ಎಡಿಟ್ ಮಾಡಿ ಟ್ರಾಲ್ ಮಾಡಿದ್ದಾರೆ. ಜೊತೆಗೆ ಹುಲಿಕುಂಟೆ ಮೂರ್ತಿ ಅವರ ಪತ್ನಿಯ ಮುಖಪುಟದಲ್ಲಿ ಅಸಹ್ಯ ಕಾಮೆಂಟ್ ಮಾಡಿದ್ದಲ್ಲದೆ ಮೂರ್ತಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.
ದೇಶದಲ್ಲಿ ಪ್ರಮುಖ ಎಂಟು ಧರ್ಮಗಳು ಮತ್ತು ಯಾವುದೇ ಧರ್ಮಕ್ಕೆ ಸೇರದ ಬುಡಕಟ್ಟು ಸಮುದಾಯಗಳು ಇವೆ ಈ ಎಲ್ಲಾ ಸಮುದಾಯದ ತೆರಿಗೆ ಹಣದಲ್ಲಿ ಚಂದ್ರಯಾನ-3 ಯಾತ್ರೆ ಕೈಗೊಂಡಿದ್ದು, ಸರ್ಕಾರದ ಅಂಗ ಸಂಸ್ಥೆಯಾದ ಇಸ್ರೋ ಒಂದು ಧರ್ಮಕ್ಕೆ ಮಾತ್ರ ಸೀಮಿತ ಮಾಡುವುದು ಮತ್ತು ಅವೈಜ್ಞಾನಿಕವಾದ ಮೂರ್ತಿ ಪೂಜೆ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದರು.
ಮಲಗುಂಡಿ ಸ್ವಚ್ಚ ಮಾಡುವ ಯಂತ್ರ ಕಂಡುಹಿಡಿಯಲಿಲ್ಲ:
ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವ ನಾಯ್ಕ್ ಮಾತನಾಡಿ 614 ಕೋಟಿ ವೆಚ್ಚಮಾಡಿ ಚಂದ್ರಯಾನ ಮಾಡಲು ನಮ್ಮ ಬಳಿ ಹಣವಿದೆ ಆದರೆ, ನಮ್ಮ ಸಹ ಮಾನವರು ಮ್ಯಾನ್ ಹೋಲ್ ಒಳಗೆ ಇಳಿದು ಮಲಮೂತ್ರ ಸ್ವಚ್ಛ ಮಾಡುತ್ತಿದ್ದಾರೆ,
ಮಲಗುಂಡಿಗಳಲ್ಲಿ ಇಳಿದು ಉಸಿರು ಕಟ್ಟಿ ಸಾಯುತ್ತಿದ್ದಾರೆ,
ಇಂತಹ ಅಮಾನವೀಯ ಕೆಲಸಕ್ಕೆ ತಡೆ ಹಾಕಲು ವಿಜ್ಞಾನಿಗಳು ಒಂದು ಯಂತ್ರವನ್ನು ಕಂಡುಹಿಡಿಯಲಿಲ್ಲ. ನಮ್ಮನ್ನಾಳುವ ಜನಪ್ರತಿನಿಧಿಗಳಿಗೂ ಇದರ ಬಗ್ಗೆ ಕನಿಷ್ಠ ಕಾಳಜಿ ಇಲ್ಲ ಎಂದು ಅಸಮದಾನ ಹೊರ ಹಾಕಿದರು.
ಪ್ರತಿಭಟನೆ ವೇಳೆಯಲ್ಲಿ ತಾಲ್ಲೂಕು ಕಚೇರಿಯ ಒಳಗೆ ನಡೆಯುತ್ತಿದ್ದ ಪೂಜೆಯ ಬಗ್ಗೆ ಅಪಸ್ವರವೆತ್ತಿದ ಪತ್ರಕರ್ತ ಹಾಗೂ ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷರಾದ ಕೆ.ವೆಂಕಟೇಶ್ ಅವರು, ಸರ್ಕಾರಿ ಕಚೇರಿಗಳು ಸಾರ್ವಜನಿಕರ ಆಸ್ತಿ ಇಲ್ಲಿ ಒಂದು ಧರ್ಮಕ್ಕೆ ಸೇರಿದ ಧಾರ್ಮಿಕ ಆಚರಣೆ ನಡೆಸುತ್ತಿರುವುದು ಸಂವಿಧಾನ ವಿರೋಧಿ ನಡೆ ಮೌಢ್ಯಾಚರಣೆಗೆ ಪೂರಕವಾದುದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹುಲಿಕುಂಟೆ ಮೂರ್ತಿ ಅವರ ವೈಚಾರಿಕ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಹಾಲಿ ಶಾಸಕರು ಮತ್ತು ಮಾಜಿ ಶಿಕ್ಷಣ ಸಚಿವರ ನಡೆ ಸಂವಿಧಾನ ವಿರೋಧಿಯಾಗಿದ್ದು ಸಂವಿಧಾನಬದ್ಧವಾಗಿ ಆಯ್ಕೆಯಾಗಿರುವ ಸುರೇಶ್ ಕುಮಾರ್ ಅವರು ಸಂವಿಧಾನದ ಆಶಯಗಳಿಗೆ ಲೋಪವಾಗದಂತೆ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ದಲಿತ ವಿಚಾರವಾದಿ ಉಪನ್ಯಾಸಕ ಹುಲಿಕುಂಟೆಮೂರ್ತಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಹುಲಿಕುಂಟೆ ಮೂರ್ತಿ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ, ಸಂವಿಧಾನದ ಜಾತ್ಯಾತೀತ ಮತ್ತು ಧರ್ಮನಿರಪೇಕ್ಷತೆಯ ಆಶಯಗಳನ್ನು ಎತ್ತಿ ಹಿಡಿಯಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿಪಿ ಆಂಜನೇಯ, ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯಹನುಮಣ್ಣ, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಿ.ಗುರುರಾಜಪ್ಪ, ಮಾಜಿ ನಗರಸಭಾ ಸದಸ್ಯ ಜಿ.ಸತ್ಯನಾರಾಯಣ್, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಮುಖಂಡ ಕುಮಾರ್ ಸಮತಳ ಮಾತನಾಡಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡ ರಾಜುಸಣ್ಣಕ್ಕಿ, ಪ್ರಜಾ ವಿಮೋಚನಾ ಸಮಿತಿ ತಾಲ್ಲೂಕು ಅಧ್ಯಕ್ಷ ರಾಜಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ತಾಲ್ಲೂಕು ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಮುಖಂಡ ಮುನಿಪಾಪಯ್ಯ, ಛಲವಾದಿ ಮಹಾಸಭಾ ತಾಲ್ಲೂಕು ಕಾರ್ಯದರ್ಶಿ ಮೂರ್ತಿ, ಪಿವಿಸಿ ಮುಖಂಡ ತಳಗವಾರ ಪುನೀತ್, ಯುವಸಂಚಲನದ ಚಿದಾನಂದ್ ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.