ಚುನಾವಣೆಗೂ ಮುನ್ನ ಕಾಂಗ್ರೆಸ್‌ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯನ್ನು ಈಗಾಗಲೇ ಜಾರಿ ಮಾಡಿದ್ದು, ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಜುಲೈ 1 ರಿಂದ ಮತ್ತೊಂದು ಮಹತ್ವದ ಯೋಜನೆ ‘ಗೃಹ ಜ್ಯೋತಿ’ ಜಾರಿಗೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ.

ವಿದ್ಯುತ್ ದರ ಏರಿಕೆ ಅವೈಜ್ಞಾನಿಕ... ಬೆಂಗಳೂರು... ಪ್ರಸ್ತುತ ಜೂನ್ ತಿಂಗಳಲ್ಲಿ ಬಂದಿರುವ ಕರೆಂಟ್ ಬಿಲ್ ಸಾರ್ವಜನಿಕರಿಗೆ ಶಾಕ್ ತರಿಸಿದೆ. ಏಪ್ರಿಲ್ ನಲ್ಲಿ ಬಂದ ಬಿಲ್ಲಿಗೂ ಜೂನ್ ತಿಂಗಳಲ್ಲಿ ಬಂದ ಬಿಲ್ಲಿಗೂ ತಾಳೆ ಹಾಕಿದರೆ ದುಪ್ಪಟ್ಟು ಏರಿಕೆ ಯಾಗಿರುವುದು ಕಂಡುಬರುತ್ತದೆ. ಆಶ್ಚರ್ಯವೆಂದರೆ ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಬೆಸ್ಕಾಮ್ ದರ ಏರಿಸಿರುವುದು, ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಜನಸಾಮಾನ್ಯರಿಗೆ ಗಾಯದ ಮೇಲೆ ಬರೇ ಎಳೆದಂತಾಗಿದೆ. ನೂತನವಾಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಪ್ರಾರಂಭದಲ್ಲೇ ವಿದ್ಯುತ್ ದರ ಏರಿಕೆಯಾಗಿರುವುದು ಕಾಂಗ್ರೇಸ್ಗೆ ಬಹುಮತ ನೀಡಿದ ರಾಜ್ಯ ಮತದಾರನಿಗೆ ಭ್ರಮ ನಿರಸವಾಗಿದೆ. ಬೆಸ್ಕಾಮ್ನ ಮೂಲಗಳ ಪ್ರಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ಅಂದರೆ ಏಪ್ರಿಲ್ 12ರಂದೆ ವಿದ್ಯುತ್ ಚಕ್ತಿ ನಿಯಂತ್ರಣ ಮಂಡಳಿಯ ದರ ಏರಿಕೆ ಪ್ರಸ್ತಾವಕ್ಕೆ ಬೊಮ್ಮಾಯಿ ಅಸ್ತು ಎಂದಿದ್ದರು. ವಿಧಾನಸಭೆ ಚುನಾವಣೆ ಘೋಷಣೆ ಯಾಗಿ ನೀತಿ ಸಂಹಿತೆ ಜಾರಿಯಲ್ಲಿದ್ದ ಪ್ರಯುಕ್ತ ಬೆಲೆ ಏರಿಕೆ ಆದೇಶ ಜಾರಿಗೆ ತಂದಿರಲಿಲ್ಲ. ಚುನಾವಣೆ ಮುಗಿದ ನಂತರ ಅಂದರೆ ಮೇ 12ರಂದು ಆದೇಶ ಜಾರಿಗೆ ಬಂದಿದೆ ಎನ್ನಲಾಗುತ್ತಿದೆ. ಅದೇನೇ ಇರಲಿ ಸಿದ್ದು ಸರ್ಕಾರ ಪ್ರಕಟಿಸಿದ ಗೃಹಜ್ಯೋತಿ ಯೋಜನೆಯ ಪ್ರಕಾರ ಕೆಲವು ಶರತ್ತುಗಳನ್ವಯ ರಾಜ್ಯದ ಎಲ್ಲರಿಗೂ 200ಯೂನಿಟ್ ವಿದ್ಯುತ್ ಫ್ರೀ ಎಂದು ಕುದ್ದು ಮುಖ್ಯಮಂತ್ರಿ ಸಿದ್ದು ಪ್ರಕಟಿಸಿರುವ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯಾಗಿರುವುದು ಆಕ್ಷೇಪರ್ಹ ಸಂಗತಿಯಾಗಿದೆ. ವಿದ್ಯುತ್ ದರ ಏರಿಕೆಗೆ ಸರಿಯಾದ ಮಾನ ದಂಡಗಳಿಲ್ಲ. ಅದಕ್ಕೆ ಕೊಟ್ಟಿರುವ ಕಾರಣ ಕೂಡಾ ಸಮರ್ಪಕವಾಗಿಲ್ಲ. ಎಲ್ಲವೂ ಅವೈಜ್ಞಾನಿಕವಾಗಿದೆ. ಏಪ್ರಿಲ್ನ ಸಚಿವ ಸಂಪುಟ ನಿರ್ಧಾರದ ದಿನದಿಂದ ಹಳೆಯ ದರವನ್ನು ಪಕ್ಕಕ್ಕಿಟ್ಟು ಹೊಸ ದರ ವಿಧಿಸಿದ್ದಾರೆ. ಕೆಲವು ಕಡೆ ಮೇ ತಿಂಗಳ ಬಿಲ್ ಬಂದಿಲ್ಲ. ಆದರೆ ಜೂನ್ ತಿಂಗಳ ಬಿಲ್ಲಿನಲ್ಲಿ ಎರಡು ತಿಂಗಳ ಬಿಲ್ ಒಟ್ಟಿಗೆ ಹಾಕಿ ಅದಕ್ಕೆ ಬಡ್ಡಿ ಸೇರಿಸಿ, ಮಿನಿಮಮ್ ದರ ಕೂಡಾ ಹೆಚ್ಚಿಸಿರುವುದು, ಜೊತೆಗೆ ದರ ದುಪ್ಪಟ್ಟು ಮಾಡಿ ಬಿಲ್ ಕೊಟ್ಟಿರುವುದು ನಿಜಕ್ಕೂ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಚುನಾವಣೆಗೂ ಮೊದಲು ಕೊಟ್ಟ ಗ್ಯಾರಂಟಿಗಳಿಗೆ ಯೋಜನೆಯ ರೂಪ ನೀಡಿ ಜಾರಿಗೊಳಿಸುತ್ತಿದೆ. ವಿರೋಧಿಗಳು ಈ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಿದ್ದರೂ ಜನ ಮಾತ್ರ ಅದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.

ಗೃಹ ಜ್ಯೋತಿಯು ಪ್ರತಿ ಮನೆಗೆ ಮಾಸಿಕ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಯೋಜನೆಯಾಗಿದ್ದು, ಜೂನ್ 18ರಿಂದ ಗೃಹಜ್ಯೋತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಅಂದಾಜು 80 ಲಕ್ಷ ಮಂದಿ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ಒದಗಿಸಲು ಸಚಿವ ಸಂಪುಟ ಈಗಾಗಲೇ ತೀರ್ಮಾನಿಸಿದೆ. ಈ ಯೋಜನೆಯಡಿ ಬಳಕೆದಾರರ ಕಳೆದ 12 ತಿಂಗಳ ವಿದ್ಯುತ್‌ ಬಳಕೆಯ ಸರಾಸರಿಯ ಮೇಲಿನ ಶೇ. 10 ರಷ್ಟು ಉಚಿತ ವಿದ್ಯುತ್‌ ಒದಗಿಸಲಾಗುವುದು. ಜುಲೈ 1 ರಿಂದ ಬಳಕೆಯಾಗುವ ವಿದ್ಯುತ್‌ಗೆ ಈ ಯೋಜನೆ ಅನ್ವಯವಾಗುತ್ತದೆ. ಅಲ್ಲಿಯ ವರೆಗಿನ ವಿದ್ಯುತ್‌ ಬಳಕೆಗೆ ಸಂಬಂಧಿಸಿದ ಬಿಲ್ಲನ್ನು ಬಳಕೆದಾರರು ಪಾವತಿಸಬೇಕು. ಆಗಸ್ಟ್ ತಿಂಗಳಿನಿಂದ ಈ ಯೋಜನೆಯ ಫಲಾನುಭವಿಗಳು ವಿದ್ಯುತ್ ಬಿಲ್ ಕಟ್ಟಬೇಕಿಲ್ಲ ಎಂದು ಸರ್ಕಾರ ಈಗಾಗಲೇ ಘೋಷಿಸಿದೆ.
ಗೃಹ ಜ್ಯೋತಿ ಯೋಜನೆ ಒಟ್ಟು ನೋಂದಣಿ – ಜೂನ್ 30ರ ಸಂಜೆ 6 ಗಂಟೆವರೆಗೆ

ರಾಜ್ಯಾದ್ಯಂತ ಗೃಹಜ್ಯೋತಿಯ ಫಲಾನುಭವಿಗಳು ಒಟ್ಟು 2.14 ಕೋಟಿಯಷ್ಟು ಜನರಿದ್ದಾರೆ. ಈ ಪೈಕಿ ಸರ್ವರ್‌ ಸಮಸ್ಯೆ ನಡುವೆಯೂ 11 ದಿನಗಳಲ್ಲಿ ಒಟ್ಟು 85,91,005 ರಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇ‌ನ್ನು 1 ಕೋಟಿಗೂ ಅಧಿಕ ಮಂದಿ ನೋಂದಣಿಗೆ ಅರ್ಜಿ ಸಲ್ಲಿಸಬೇಕಿದೆ. ಗೃಹಜ್ಯೋತಿ ಯೋಜನೆಗೆ ಬೆಸ್ಕಾಂನಲ್ಲಿ 31.55 ಲಕ್ಷ ಮಂದಿ, ಸೆಸ್ಕಾಂನಲ್ಲಿ 12.4 ಲಕ್ಷ ಮಂದಿ, ಜೆಸ್ಕಾಂನಲ್ಲಿ 8.15 ಲಕ್ಷ ಮಂದಿ ಹೆಸ್ಕಾಂನಲ್ಲಿ 15.99 ಲಕ್ಷ, ಎಚ್‌ಆರ್‌ಇಸಿಎಸ್‌ನಲ್ಲಿ 36 ಸಾವಿರ ಮಂದಿ ಹಾಗೂ ಮೆಸ್ಕಾಂನಲ್ಲಿ 9.7 ಲಕ್ಷ ಮಂದಿ ಮಂದಿ ನೋಂದಾಯಿಸಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜಲ ವಿವಾದ | ನ್ಯಾಯಾಧೀಕರಣ ರಚನೆಗಿಂತ ಮಾತುಕತೆ ಮೂಲಕ ಪರಿಹಾರಕ್ಕೆ ಡಿಕೆಶಿ ಮನವಿ

ನೋಂದಣಿ ಮಾಡಿಸಲು ಗಡುವು ಇಲ್ಲ

‘ಗೃಹಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್‌ ಪಡೆಯಲು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಲ್ಲ. ಆದರೆ, ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲು ನೋಂದಣಿ ಮಾಡುವುದು ಕಡ್ಡಾಯ ಎಂದು ಇಂಧನ ಸಚಿವ ಕೆ ಜೆ ಜಾರ್ಚ್‌ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು.

ನೋಂದಣಿಗೆ ಏನೇನು ಬೇಕು? ಮತ್ತು ನೋಂದಣಿ ಮಾಡುವುದು ಹೇಗೆ?

‘ಗೃಹಜ್ಯೋತಿ’ ಯೋಜನೆಗೆ ನೋಂದಣಿ ಮಾಡುವಾಗ ಫಲಾನುಭವಿಗಳು ಆಧಾರ್ ಕಾರ್ಡ್, ಗ್ರಾಹಕರ ಐಡಿ ಮಾಹಿತಿ (ವಿದ್ಯುಚ್ಛಕ್ತಿ ಬಿಲ್‌ನಲ್ಲಿ ಇರುವಂತೆ) ಮತ್ತು ಮೊಬೈಲ್‌ ನಂಬರ್‌ ಬೇಕು. ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಗೆ ವೆಬ್​ಸೈಟ್​ ವಿಳಾಸ https://sevasindhugs.karnataka.gov.in. ಸಂಪರ್ಕಿಸಬಹುದು. ಮೊಬೈಲ್, ಕಂಪ್ಯೂಟರ್, ಲ್ಯಾಪ್​ಟಾಪ್​ನಲ್ಲೂ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಿ ಎಂದು ಇಂಧನ ಇಲಾಖೆ ಹೇಳಿದೆ.

ಎಸ್ಕಾಂ ಹೆಸರು
ಖಾತೆ ಸಂಖ್ಯೆ
ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ
ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ
ಎಸ್ಕಾಂ ಹೆಸರು1
ಬಳಕೆದಾರರ ವಿಧ (ಇಲ್ಲಿ ಎರಡು ಆಯ್ಕೆಗಳಿದ್ದು ಬಾಡಿಗೆದಾರರು/ ಮಾಲೀಕರು) ಎಂದಿದೆ
ಆಧಾರ್ ಸಂಖ್ಯೆ
ಅರ್ಜಿದಾರರ ಹೆಸರು
ಸಂವಹನಕ್ಕಾಗಿ ದೂರವಾಣಿ ಸಂಖ್ಯೆ

ಈ ವಿವರಗಳನ್ನು ಭರ್ತಿ ಮಾಡಬೇಕಿದೆ.