ಬೆಂಗಳೂರು:ಬುಧವಾರ ಸಂಜೆ ದೊಡ್ಡಬಳ್ಳಾಪುರ ತಾಲೂಕಿನ ಕರ್ನಾಟಕ ರಾಜ್ಯ ನೇಕಾರರ ಸಂಘಟನೆಗಳ ಒಕ್ಕೂಟದ ಮುಖಂಡರು, ಮಾಜಿ ಶಾಸಕರಾದ ಟಿ.ವೆಂಕಟರಮಣಯ್ಯ ಅವರು ಜವಳಿ, ಕಬ್ಬು ಮತ್ತು ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ ಅವರನ್ನು ಭೇಟಿ ಮಾಡಿ ನೇಕಾರರ ಸಮಸ್ಯೆಗಳ ಬಗ್ಗೆ ವಿವರಿಸಿ ಹಲವಾರು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ನೂತನ ಸಚಿವ ಶಿವಾನಂದ ಎಸ್ ಪಾಟೀಲ್ ಅವರಿಗೆ ನೇಕಾರರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಪಿಎ ವೆಂಕಟೇಶ್ ರಾಜ್ಯ ನೇಕಾರರ ಸಮಸ್ಯೆಗಳ ಕುರಿತು ಮನವಿ ಪತ್ರದಲ್ಲಿರುವ 14 ಬೇಡಿಕೆಗಳ ಕುರಿತು ವಿವರಿಸಿದರು. ಮುಖ್ಯವಾಗಿ ವಿದ್ಯುತ್ ಬೆಲೆ ಏರಿಕೆ ದುಬಾರಿಯಾಗಿದ್ದು ತಕ್ಷಣ ಹಿಂಪಡೆಯಬೇಕು ಹಾಗೂ ನೇಕಾರರ ಮಗ್ಗಗಳಿಗೆ 20 ಎಚ್‌ಪಿ ವರೆಗಿನ ವಿದ್ಯುತ್ತು ಉಚಿತವಾಗಿ ನೀಡಬೇಕು, ಕರ್ನಾಟಕ ರಾಜ್ಯ ನೇಕಾರರ ಹಿತ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ನೇಕಾರರಿಗೆ ಗುರುತಿನ ಚೀಟಿಯನ್ನು ನೀಡಲು ದೊಡ್ಡಬಳ್ಳಾಪುರದಲ್ಲಿ ಬೃಹತ್ ಹೋರಾಟ ನಡೆಸಿ ಒತ್ತಾಯಿಸಲಾಗಿತ್ತು, ಹೋರಾಟದ ಫಲವಾಗಿ ಈಗ ರಾಜ್ಯದಲ್ಲಿ ಸೆನ್ಸಸ್ ಕಾರ್ಯ ಮುಗಿದಿದ್ದು ಇಡೀ ರಾಜ್ಯದ ನೇಕಾರರಿಗೆ ತಕ್ಷಣ ನೇಕಾರ ಗುರುತಿನ ಚೀಟಿಯನ್ನು ನೀಡಬೇಕು, ನೇಕಾರರ ಕಲ್ಯಾಣ ಮಂಡಳಿಯನ್ನು ರಚಿಸಿ ರಾಜ್ಯದ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ರೀತಿಯಲ್ಲಿ ಇ ಎಸ್ ಐ ಸೇರಿದಂತೆ 20 ಸೌಲಭ್ಯಗಳನ್ನು ನೇಕಾರರಿಗೂ ನೀಡಬೇಕು ಮತ್ತು ಈ ಕಲ್ಯಾಣ ಮಂಡಳಿಗೆ ಒಂದು ಸಾವಿರ ಕೋಟಿಯ ಆವರ್ತನಿದಿಯನ್ನು ಮೀಸಲಿಡಬೇಕು. ನೇಕಾರರು ಸ್ವಯಂ ಉದ್ಯೋಗಕ್ಕೆ ಖರೀದಿಸುವ ಮಗ್ಗಗಳಿಗೆ ಮತ್ತು ಜಾಕಾರ್ಡುಗಳಿಗೆ ಶೇಕಡಾ 75 ಸಹಾಯ ದನ ನೀಡಬೇಕು. ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರು ಸಚಿವರಿಗೆ ನೇಕಾರರ ಸಮಸ್ಯೆಗಳ ಕುರಿತು ವಿವರಿಸಿದರು.
ಸಚಿವ ಶಿವಾನಂದ ಪಾಟೀಲ್ ಅವರು ಮಾತನಾಡಿ ನಿಮ್ಮ ಎಲ್ಲ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತಕ್ಷಣಕ್ಕೆ ಮಾಡಬಹುದಾದ ಮತ್ತು ದೀರ್ಘಾವಧಿಯಲ್ಲಿ ಮಾಡಬಹುದಾದ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಮತ್ತು ಸಾಧ್ಯವಾದಷ್ಟು ಬೇಗ ಅನುಷ್ಠಾನಕ್ಕೆ ಬರುವಂತೆ ಮಾಡಲಾಗುವುದು ಎಂದು ತಿಳಿಸಿದ ಅವರು, ಅತಿ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಜೊತೆ ರಾಜ್ಯ ನೇಕಾರರ ಸಂಘಟನೆಗಳ ಮುಖಂಡರನ್ನೊಳಗೊಂಡ ಸಭೆಯನ್ನು ನಡೆಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀ ರೇವಣ್ಣ, ನೇಕಾರಸಮುದಾಯಗಳ ಮುಖಂಡರಾದ ಗೋವಿಂದಪ್ಪ ಅವರು ಹಾಜರಿದ್ದರು
ನಿಯೋಗದಲ್ಲಿ ಮುಖಂಡರಾದ ಆರ್ ಎಸ್ ಶ್ರೀನಿವಾಸ್, ಸಿ ಸುರೇಶ್, ವೇಣು, ಕೆರಮಲ ಬದ್ರಿ, ಎಂ ಮುನಿರಾಜು, ಎಂ ಚೌಡಯ್ಯ, ಸಿ ಅಶ್ವತ್, ಜನಪರ ಮಂಜು, ನಾಗೇಶ್, ಎಲ್ ಶಿವಕುಮಾರ್, ರಾಜಶೇಖರ್, ಆನಂದ್, ತ್ಯಾಗರಾಜ್, ನೇಕಾರ ಸಂಘಟನೆಗಳ ಒಕ್ಕೂಟದ ಪರವಾಗಿ ಪಾಲ್ಗೊಂಡಿದ್ದರು.