ದೊಡ್ಡಬಳ್ಳಾಪುರ: ನಾಳೆ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಆಚರಣೆ‌ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ‌ ಬಾಲದಂಡಿ ಸಲಹೆ ನೀಡಿದರು.

ನಗರದ ಬಸವ ಭವನದಲ್ಲಿ ಬುಧವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರು ಹಾಗೂ ಅನ್ಯ ಧರ್ಮಿಯರು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳಿಗೆ ಆಸ್ಪದ ನೀಡಬಾರದು. ಅಂತಹ ಚಟುವಟಿಕೆ‌ ಕಂಡುಬಂದರೆ ಪೊಲೀಸರಿಗೆ ಮಾಹಿತ ನೀಡಬೇಕು ಎಂದು ಸೂಚಿಸಿದರು.

ಪ್ರತಿಯೊಂದು‌ ಧರ್ಮವೂ‌ ಶಾಂತಿ, ಸಹಭಾಳ್ವೆ‌ ಹಾಗೂ ಸೌಹಾರ್ದತೆಯನ್ನು ಸಾರುತ್ತವೆ. ಅವರವರ ಧರ್ಮ ಅವರಿಗೇ ಶ್ರೇಷ್ಠ. ಅವರ ಆಚರಣೆಗಳಿಗೆ ಯಾರೂ ಕೂಡ ದಕ್ಕೆ ತರಬಾರದು.‌
ಆಯಾ ಧರ್ಮದ ಧಾರ್ಮಿಕ ಹಬ್ಬಗಳ ಆಚರಣೆ ವೇಳೆ ಅನ್ಯಧರ್ಮಿಯರು ಸಹಕರಿಸಬೇಕು. ಆಗಷ್ಟೇ ದೇಶದ ಏಕತೆಗೆ ಅರ್ಥ ಬರಲಿದೆ. ಶಾಂತಿ ಭಂಗ ಉಂಟು ಮಾಡುವ ಹೇಳಿಕೆ, ಧರ್ಮ‌ಧರ್ಮಗಳ ವಿರುದ್ಧ ಎತ್ತಕಟ್ಟುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು. ಆಗೊಮ್ಮೆ ಕಾನೂನು ಉಲ್ಲಂಘಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಜೊತೆಗೆ ಶಾಂತಿ ಭಂಗ ಮಾಡದಂತೆ ಎಚ್ಚರಿಕೆ‌ ಸಹ ನೀಡಲಾಗಿದೆ ಎಂದು ಎಸ್ಪಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲೂಕುಗಳ ಧಾರ್ಮಿಕ ಮುಖಂಡರ ಸಲಹೆ ಸೂಚನೆ ಪಡೆದು, ಭದ್ರತೆ ಒದಗಿಸಲಾಗಿದೆ. ಸಮಾಜದ ಶಾಂತಿ ಕಾಪಾಡಲು ಪೊಲೀಸ್‌ ಇಲಾಖೆ ಸನ್ನದ್ಧವಾಗಿದೆ ಎಂದರು.

ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಎರಡು ಕೆಎಸ್‌ಆರ್ ಪಿ ತುಕಡಿ, 200 ಮಂದಿ ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್. ಪುರುಷೋತ್ತಮ್, ಡಿವೈಎಸ್ಪಿ ನಾಗರಾಜ್‌, ವಿವಿಧ ತಾಲೂಕುಗಳ ಪೊಲೀಸ್ ಇನ್ಸ್‌ಪೆಕ್ಟರ್ ಗಳು, ಸಬ್ ಇನ್ಸ್‌ಪೆಕ್ಟರ್‌ ಭಾಗವಹಿಸಿದ್ದರು.